ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೀಘ್ರ ಚೇತರಿಕೆಗೆ ವಿಶೇಷ ಪೂಜೆ
ಶಿವಮೊಗ್ಗ: ದೇಶದ ಹೆಮ್ಮೆಯ ದಿಟ್ಟ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೀಘ್ರ ಚೇತರಿಕೆಗಾಗಿ ಶಿವಮೊಗ್ಗದ ಕೋಟೆ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಸಂತೋಷ್ ಬಳ್ಳಕೆರೆ ನೇತೃತ್ವದಲ್ಲಿ ಶಿವಮೊಗ್ಗ ನಾಗರಿಕರೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಇತ್ತೀಚೆಗೆ ನಡೆದ ಫ್ಲೈದುಬೈ ವಿಮಾನಯಾನದ ಸಂದರ್ಭದಲ್ಲಿ ಎದುರಾದ ತುರ್ತು ಪರಿಸ್ಥಿತಿಯಲ್ಲಿ ತಮ್ಮ ಧೈರ್ಯ, ಸಮಯಪ್ರಜ್ಞೆ ಹಾಗೂ ವೃತ್ತಿಪರತೆಯಿಂದ ಸುಮಾರು 174 ಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಘಟನೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಮತ್ತೆ ತಮ್ಮ ಕರ್ತವ್ಯಕ್ಕೆ ಮರಳಲಿ ಹಾಗೂ ಅವರ ಕುಟುಂಬಕ್ಕೆ ಧೈರ್ಯ ಮತ್ತು ಆತ್ಮಸ್ಥೈರ್ಯ ದೊರೆಯಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಲ್ಲಿಕಾರ್ಜುನ್, ಪ್ರದೀಪ್ ಯಲಿ, ಪರಶುರಾಮ್, ದೀಪು, ಮೋಹನ್, ಸಿದ್ದಣ್ಣ, ಜಗದೀಶ್, ಉಮೇಶ್, ಮೇಘರಾಜ್, ತಮ್ಮಡಿಹಳ್ಳಿ ನಾಗರಾಜು, ಮಾಜಿ ಕಾರ್ಪೊರೇಟರ್ ಪ್ರಭಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

