District NewsLatest News

ಸೂಡಾ ಅಧ್ಯಕ್ಷರಾಗಿ ಮಧುಸೂದನ್ ಅಧಿಕಾರ ಸ್ವೀಕಾರ

Share Below Link

ಶಿವಮೊಗ್ಗ ನ್ಯೂಸ್‌ ವರದಿ.

ಶಿವಮೊಗ್ಗ: ರಾಜ್ಯ ಸರ್ಕಾರ ಮತ್ತು ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾವಿಟ್ಟು, ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ದಕ್ಕೆಯಾಗದಂತೆ ಶಿವಮೊಗ್ಗ- ಭದ್ರಾವತಿ ಅವಳಿನಗರಗಳ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ( ಸೂಡಾ) ದ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ಹೇಳಿದರು.

ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ದಿಂದ ಬೈಕ್ ರಾಲಿ ಮೂಲಕ ನೂತನ ಸೂಡಾ ಅಧ್ಯಕ್ಷ. ಸಿ.ಜಿ.ಮಧು ಸೂದನ್ ಅವರನ್ನು ಮೆರವಣಿಗೆಯಲ್ಲಿ ಕರೆ ದೊಯ್ಯಲಾಯಿತು. ಪಕ್ಷದ ಅನೇಕ ಮುಖಂಡರು ಮೆರವಣಿಗೆ ಯಲ್ಲಿದ್ದರು. ವಿಶೇಷವಾಗಿ ಎನ್ ಎಸ್ ಯು ಐ ಕಾರ್ಯಕರ್ತರು ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಾ, ಘೋಷಣೆ ಕೂಗುತ್ತಾ ಸಾಗಿದರು ಸೂಡಾ ಕಚೇರಿ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಸೂಡಾ ಕಚೇರಿಯಲ್ಲಿ ಶನಿವಾರ ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ನೂರಾರು ಮಂದಿ ಎನ್ ಎಸ್ ಯು ಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಸೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಬಾಳಾ ಚಿಕ್ಕ ವಯಸ್ಸಿಗೆ ನಾನು ಎನ್ ಎಸ್ ಯು ಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಂದವನು. ಅಪ್ಪ- ಅಮ್ಮ ನಿಗೆ ನಾನು ಸರ್ಕಾರಿ ಹುದ್ದೆಗೆ ಹೋಗಬೇಕೆನ್ನುವ ಆಸೆ. ಹಾಗಾಗಿ ನಾನು ಎನ್ ಎಸ್ ಯು ಐ ಮೂಲಕ. ವಿದ್ಯಾರ್ಥಿ ಸಂಘಟನೆ ಯಲ್ಲಿ ತೊಡಗಿಸಿ ಕೊಂಡು ಕೇಸು, ವಗೈರೆ ಅಂತ ಓಡಾಡುವಾಗ ತುಂಬಾ ಬೇಸರ ಪಟ್ಟು ಕೊಳ್ಳುತ್ತಿದ್ದರು. ಆದರೆ ಇವತ್ತು ಅವರಲ್ಲಿ ಕಂಡ ಖುಷಿ ನನ್ನ ಬದುಕಿನಲ್ಲೊಂದು ಸಮಾಧಾನ ತಂದಿದೆ ಎಂದರು.

ಸೂಡಾ ಅಧ್ಯಕ್ಷ ಹುದ್ದೆ ನನಗೆ ಸುಲಭವಾಗಿ ಸಿಕ್ಕಿರಬಹುದು,ಆದರೆ ಇದರ ಹಿಂದೆ ದೊಡ್ಡ ಶ್ರಮವಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಡಾವಂತರಿಗೆ, ಕಷ್ಟಪಟ್ಟವರಿಗೆ, ಪಕ್ಷ ಸಂಘಟನೆಗೆ ದುಡಿದವರಿಗೆ ಯಾವತ್ತಿದ್ದರೂ ಪ್ರತಿಫಲ ಇದ್ದೇ ಎನ್ನುವುದಕ್ಕೆ ನಾನೇ ಸಾಕ್ಷಿ. ಹಾಗಾಗಿ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಈ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನಮುಖಿ ಯಾಗಿ ಹಾಗೂಪಕ್ಷದ ಯುವಕರಿಗೆ ಸ್ಪೂರ್ತಿಯಾಗುವ ಹಾಗೆ ಬಳಸಿಕೊಳ್ಳುವೆ ಎಂದರು. 

ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಮಾತನಾಡಿ, ನಾನು ಎನ್ ಎಸ್ ಯು ಐ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಕಾರಣವಾದವರು ಮಧುಸೂದನ್ ಅವರು. ಹಾಗಾಗಿ ಅವರಿಗೆ ಯಾವುದಾದರೂ ಹುದ್ದೆ ಸಿಗಬೇಕೆನ್ನುವ ಕೊರಗು ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಈಗ ಅದು ಸಂಪೂರ್ಣ ಗೊಂಡಿದೆ. ತುಂಭಾ ಖುಷಿಯಾಗಿದೆ. ಪಕ್ಷದಲ್ಲಿ ದುಡಿದವರನ್ನು ವರಿಷ್ಟರು ಕಡೆಗಣಿಸಲಾರರು ಎಂಬುದಕ್ಕೆ ಇದು ಸಾಕ್ಷಿ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು, ಅವರಿಗೂ ಅಧಿಕಾರ ಸಿಗಬೇಕೆಂಬುದು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿತ್ತು. ಅದು ಶಿವಮೊಗ್ಗದಿಂದಲೇ ಪ್ರಾರಂಭವಾಗಿದೆ. ಚೇತನ್ ಗೌಡ, ಹೆಚ್.ಸಿ. ಯೋಗೇಶ್ ಅವರ ನಂತರವೀಗ ಮಧುಸೂದನ್ ಅವರಿಗೂ ಪ್ರಮುಖ ಹುದ್ದೆ ಸಿಕ್ಕಿದೆ. ಯುವಕರಿಗೆ ದೊಡ್ಡ ಸಂದೇಶ ನೀಡಿದೆ . ಈ ಬೆಳವಣಿಗೆ ಹೀಗೆಯೇ ಮುಂದುವರೆಯಲಿ, ಪಕ್ಷ ಸಂಘಟನೆ ತಳಮಟ್ಟದಿಂದ ಗಟ್ಟಿಯಾಗಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್ ಮಾತನಾಡಿ, ಯುವಶಕ್ತಿಗೆ ಅವಕಾಶ ಸಿಗಬೇಕಿದೆ. ಯಾಕೆಂದರೆ ಯುವಶಕ್ತಿಯೇ ಪಕ್ಷದ ದೊಡ್ಡ ಆಸ್ತಿಯಾಗಿದೆ. ಇದನ್ನು ಪಕ್ಷವು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆಯೇ ಯಾವ ಶಕ್ತಿಯೂ ಕೂಡ ಸಿಕ್ಕ ಅವಕಾಶವನ್ನು ಪಕ್ಷ ಸಂಘಟನೆಗೆ ಬಳಕೆಮಾಡಿಕೊಳ್ಳಬೇಕಿದೆ ಎಂದರು.

ಭದ್ರಾವತಿ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಎಂ. ಖಾದರ್ ಮಾತನಾಡಿ, ಪಕ್ಷಕ್ಕಾಗಿ ದುಡಿದವರನ್ನು, ಕಷ್ಟ ಪಟ್ಟವರನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಕೈ ಬಿಡಿವುದಿಲ್ಲ ಎನ್ನುವುದಕ್ಕೆ ಸಿ.ಜಿ.ಮಧುಸೂದನ್ ಅವರ ನೇಮಕವೇ ಸಾಕ್ಷಿ. ಈ ನೇಮಕ ಪಕ್ಷದ ಯುವ ಶಕ್ತಿಗೆ ದೊಡ್ಡ ಹುರುಪು ತಂದಿದೆ. ಇದರ ಹಿಂದೆ ಭದ್ರಾ ವತಿ ಶಾಸಕರಾದ ಬಿ.ಕೆ.ಸಂಗಮೇಶ್ವರ್, ಯುವ ನಾಯಕರಾದ ಬಸವೇಶ್, ಗಣೇಶ್ ಅವರ ಶ್ರಮವಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೀಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಚಂದ್ರಭೂಪಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ವಿಜಯ್, ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರರಾದ ಬಸವೇಶ್, ಗಣೇಶ್, ನಗರ ದಕ್ಷಿಣ ಬ್ಲಾಕ್ ಅಧ್ಯಕ್ಷ ಖಲೀಂ ಪಾಶಾ, ಆರೀಫ್, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಪಕ್ಷದ ಮುಖಂಡರಾದ ಎಸ್.ರವಿಕುಮಾರ್, ಬಿ. ಎಸ್.ಬಸವೇಶ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ಶೇಷಾದ್ರಿ, ಎಂ.ಎಸ್.ಸಿದ್ದಪ್ಪ, ನೇತ್ರಾವತಿ ಗೌಡ, ತಂಗರಾಜ್, ಗಿರೀಶ್ ಬುಕ್ಲಾಪುರ, ವೈ. ತಿಮ್ಮರಾಜು ,ವೀರೇಶ್ ಕ್ಯಾತಿನಕೊಪ್ಪ, ಹಾಲೇಶ್, ಚರಣ್, ರವಿ ಸೇರಿದಂತೆ ಮತ್ತಿತರರುಇದ್ದರು.

Leave a Reply

Your email address will not be published. Required fields are marked *