District News

ಸೇವಾ ಕಾಯಂಗೆ ಆಗ್ರಹಿಸಿ ಅ. 16ರಿಂದ ಪಾದಯಾತ್ರೆ

Share Below Link

ಶಿವಮೊಗ್ಗ, ಅ.13: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸೇವಾ ಭದ್ರತೆ ಇಲ್ಲ. ಆದ್ದರಿಂದ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಬೇಕು ಎಂದು ನವ ಕರ್ನಾಟಕ ಎಂಆರ್‌ಡಬ್ಲ್ಯು/ವಿಆರ್‌ಡಬ್ಲ್ಯು/ಯುಆರ್‌ಡಬ್ಲ್ಯು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಯಶೋಧ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ಪಿಂಚಣಿಯನ್ನೂ ಕಡಿತಗೊಳಿಸಿರುವುದು ನೋವು ತಂದಿದೆ. ವಿಕಲಚೇತನರ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಕಾರ್ಯಕರ್ತರ ಸೇವೆ ಕಾಯಂ ಮಾಡುವುದು, ಮಾಸಿಕ ಗೌರವಧನವನ್ನು ಕನಿಷ್ಠ ₹5 ಸಾವಿರಕ್ಕೆ ಹೆಚ್ಚಿಸುವುದು ಹಾಗೂ ತಡೆಹಿಡಿದಿರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 16ರಿಂದ ರಾಮನಗರದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಾದಯಾತ್ರೆಯಲ್ಲಿ ರಾಜ್ಯದ ಸುಮಾರು 3,500ರಿಂದ 4,000 ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಶಿವಮೊಗ್ಗ ಜಿಲ್ಲಾ ಸಮಿತಿ ಹಾಗೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ ಪಾದಯಾತ್ರೆಗೆ ಬೆಂಬಲ ಸೂಚಿಸಿವೆ ಎಂದರು.
ರಾಜ್ಯ ಕಾರ್ಯದರ್ಶಿ ಕೆ.ಎಸ್. ಚಂದ್ರಯ್ಯ, ಬಸವರಾಜ, ರಮೇಶ್, ನಾಸಿರ್, ಗಂಗಾಧರ್, ಗಜೇಂದ್ರ ಮತ್ತು ಹನುಮಂತ ಇದ್ದರು.

Leave a Reply

Your email address will not be published. Required fields are marked *