ಬೆಲೆ ಏರಿಕೆಗೆ ಅನುಗುಣವಾಗಿ ಸ್ವಚ್ಛತಾ ಕಾರ್ಮಿಕರಿಗೆ ನ್ಯಾಯಯುತ ವೇತನಕ್ಕೆ ಆಗ್ರಹ
ಶಿವಮೊಗ್ಗ: ಬೆಲೆ ಏರಿಕೆಗೆ ಅನುಗುಣವಾಗಿ ನ್ಯಾಯಯುತ ವೇತನ ನಿಗದಿಪಡಿಸುವುದು ಹಾಗೂ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಪೊಲೀಸ್ ಠಾಣೆಗಳು ಮತ್ತು ಇತರೆ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರಿ ಕಲ್ಯಾಣ ಸೌಲಭ್ಯಗಳು, ಪಿಎಫ್, ವೇತನ ಚೀಟಿ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವಂತೆ ಒತ್ತಾಯಿಸಿ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸಫಾಯಿ ಕಾರ್ಮಿಕರ ಸಂಘದ (ರಿ.) ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರವು 22-05-2026ರಂದು ಹೊರಡಿಸಿರುವ ಪರಿಷ್ಕೃತ ವೇತನಕ್ಕೆ ಸಂಬಂಧಿಸಿದ ಸರ್ಕಾರಿ ಸುತ್ತೋಲೆಯನ್ನು ಅರ್ಹ ಸ್ವಚ್ಛತಾ ಕಾರ್ಮಿಕರಿಗೆ ಜಾರಿಗೊಳಿಸಬೇಕಾಗಿದೆ. ಆದರೆ, ಈವರೆಗೂ ಪರಿಷ್ಕೃತ ವೇತನ ದೊರೆಯದಿರುವುದು ಕಾರ್ಮಿಕರಿಗೆ ತೀವ್ರ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಉಪಮುಖ್ಯಮಂತ್ರಿ ಹಾಗೂ ಸಮಿತಿಯ ಅಧ್ಯಕ್ಷರಾದ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಹಾಗೂ ಇತರ ಸಮಿತಿ ಸದಸ್ಯರನ್ನು ಒಳಗೊಂಡ ಉಪಸಮಿತಿಯನ್ನು ನೇಮಕ ಮಾಡಿದೆ. ಆದರೆ, ಈ ಉಪಸಮಿತಿಯು ಈವರೆಗೂ ತನ್ನ ವರದಿಯನ್ನು ಸಲ್ಲಿಸದಿರುವ ಕಾರಣ ಪರಿಷ್ಕೃತ ವೇತನ ಜಾರಿ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ, ಹಾಲು, ಸಕ್ಕರೆ, ಗೋಧಿ, ಅಡುಗೆ ಅನಿಲ ಹಾಗೂ ಇತರೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಹಾಗೂ ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಘೋಷಿಸಿರುವ ಪರಿಷ್ಕೃತ ವೇತನವನ್ನು ಜಾರಿಗೊಳಿಸದಿರುವುದು ಕಾರ್ಮಿಕ ಕುಟುಂಬಗಳ ಜೀವನ ನಿರ್ವಹಣೆಗೆ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಲಾಗಿದೆ.
ಕಾರ್ಮಿಕರಿಗೆ ಸರಿಯಾದ ವೇತನ ಚೀಟಿ ದೊರೆಯುತ್ತಿಲ್ಲ. ಪಿಎಫ್ ಖಾತೆಯ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಕಾರ್ಮಿಕ ಇಲಾಖೆಯು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಮಿಕರಿಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ, ಅವರಿಗೆ ದೊರೆಯಬೇಕಾದ ವೇತನ, ಪಿಎಫ್, ವೇತನ ಚೀಟಿ ಹಾಗೂ ಇತರೆ ಕಾನೂನುಬದ್ಧ ಸೌಲಭ್ಯಗಳನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿದ ಉಪಸಮಿತಿಯ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸಮಿತಿಗೆ ನಿರ್ದೇಶನ ನೀಡಬೇಕು. ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದಲ್ಲಿ ಸರ್ಕಾರಿ ಸುತ್ತೋಲೆಯ ಪ್ರಕಾರ ಅರ್ಹ ಕಾರ್ಮಿಕರಿಗೆ ಪರಿಷ್ಕೃತ ವೇತನವನ್ನು ತಕ್ಷಣ ಪಾವತಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಸಂಸ್ಥೆಗಳಿಗೆ ಆದೇಶಿಸಬೇಕು. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಪದಾರ್ಥಗಳ ದುಬಾರಿ ದರ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳನ್ನು ಪರಿಗಣಿಸಿ ಕಾರ್ಮಿಕರಿಗೆ ನ್ಯಾಯಯುತ ಜೀವನ ನಿರ್ವಹಣಾ ವೇತನವನ್ನು ಖಚಿತಪಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಪೊಲೀಸ್ ಠಾಣೆಗಳು ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಕಾರ್ಮಿಕರನ್ನು ಸಂಬಂಧಪಟ್ಟ ಸರ್ಕಾರಿ ಕಲ್ಯಾಣ ಯೋಜನೆಗಳು ಹಾಗೂ ಅರ್ಹ ಸೌಲಭ್ಯಗಳ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಭಾರತಿ, ಭಾನುಪ್ರಸಾದ್ ಬಿ.ಎ., ಕೃಷ್ಣಮೂರ್ತಿ, ಕಿರಣ್, ಮಂಜುಳಾ, ಮರಿಯಮ್ಮ, ಅರುಣಾಕುಮಾರಿ, ಶಾರದಾ, ಲಲಿತಾ, ಗೌರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

