District News

ಅ.16ರಂದು ಗಮಕ ದಸರಾ: ವೈ.ಎಸ್.ವಿ. ದತ್ತ ಉದ್ಘಾಟನೆ; ಮೂವರು ಕಲಾವಿದರಿಗೆ ಸನ್ಮಾನ

Share Below Link

ಶಿವಮೊಗ್ಗ, ಅ.13: ಗಮಕ ವಾಚನ–ವ್ಯಾಖ್ಯಾನ, ವಿಚಾರಗೋಷ್ಠಿ, ನೃತ್ಯರೂಪಕ ಹಾಗೂ ವಿವಿಧ ಸ್ಪರ್ಧೆಗಳನ್ನೊಳಗೊಂಡ ಗಮಕ ದಸರಾ ಅ.16ರಂದು ನಗರದಲ್ಲಿ ನಡೆಯಲಿದೆ ಎಂದು ರಾಜ್ಯ ಗಮಕಕಲಾ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷರಾದ ಹೆಚ್. ಆರ್.ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಸರಾ ಉತ್ಸವ ಸಮಿತಿ, ಮಹಾನಗರ ಪಾಲಿಕೆ ಹಾಗೂ ರಾಜ್ಯ ಗಮಕಕಲಾ ಪರಿಷತ್ ಸಹಯೋಗದಲ್ಲಿ ಅಂದು ಬೆಳಿಗ್ಗೆ 9.30ರಿಂದ ಸಂಜೆ 7ರವರೆಗೆ ಬಾಲರಾಜ ಅರಸ್ ರಸ್ತೆಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್ ಸಭಾಂಗಣದ ‘ಮಹಾಕವಿ ಕುವೆಂಪು ವೇದಿಕೆ’ಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಡೂರಿನ ಮಾಜಿ ಶಾಸಕ ಹಾಗೂ ಗಮಕ ವ್ಯಾಖ್ಯಾನಕಾರ ವೈ.ಎಸ್.ವಿ. ದತ್ತ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಗಮಕಕಲಾ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಆರ್. ಅಶ್ವತ್ಥನಾರಾಯಣ ಶೆಟ್ಟಿ ಹಾಗೂ ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿರುವರು ಎಂದರು.

ಬೆಳಿಗ್ಗೆ 10.30ಕ್ಕೆ ನಡೆಯುವ ಗಮಕ ವಾಚನ–ವ್ಯಾಖ್ಯಾನದಲ್ಲಿ ಡಾ. ಸನತ್ ಕುಮಾರ್ ವಾಚನ ಮಾಡಲಿದ್ದು, ವೈ.ಎಸ್.ವಿ. ದತ್ತ ವ್ಯಾಖ್ಯಾನ ನೀಡುವರು. ಬೆಳಿಗ್ಗೆ 11.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ರಾಮಸುಬ್ರಾಯ ಶೇಟ್ ಅವರು ‘ಗಮಕದ ಪ್ರಚಾರ ಹೇಗೆ?’ ವಿಷಯವಾಗಿ ಹಾಗೂ ತುರುವನೂರು ಮಲ್ಲಿಕಾರ್ಜುನ ಅವರು ವಚನ ಸಾಹಿತ್ಯ ಕುರಿತು ಮಾತನಾಡುವರು. ಇದೇ ವೇಳೆ ಟಿ.ಜೆ. ನಾಗರತ್ನಾ ಮತ್ತು ತನ್ಮಯೀ ಅವರಿಂದ ವಚನಗಾಯನ ನಡೆಯಲಿದೆ ಎಂದರು.

ಮಧ್ಯಾಹ್ನ 3ಕ್ಕೆ ಶ್ರೀಲಕ್ಷ್ಮೀ ಶಾಸ್ತ್ರೀ ಮತ್ತು ತಂಡದವರಿಂದ ಗಮಕ–ನೃತ್ಯರೂಪಕ ಪ್ರದರ್ಶನವಿದೆ. ಸಂಜೆ 4ಕ್ಕೆ ನಡೆಯುವ ಕವಿ–ಕಾವ್ಯ ಪರಿಚಯ ಗೋಷ್ಠಿಯಲ್ಲಿ ಡಾ. ಎ.ಎಸ್. ವತ್ಸಲಾ ಅವರು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕುರಿತು ಮಾತನಾಡುವರು. ಸಂಜೆ 5ಕ್ಕೆ ಪ್ರಸಾದ ಭಾರದ್ವಾಜ್ ಅವರ ಗಮಕ ವಾಚನಕ್ಕೆ ಸಾಗರದ ಡಾ. ವಸುಮತಿ ಗೌಡ ವ್ಯಾಖ್ಯಾನ ನೀಡುವರು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆ, ಉದಯೋನ್ಮುಖ ಗಮಕಿಗಳ ವಾಚನ–ವ್ಯಾಖ್ಯಾನ ಹಾಗೂ ಗಮಕ ರಸಪ್ರಶ್ನೆ ನಡೆಯಲಿವೆ. ಯುವ ಗಮಕಿಗಳ ವಾಚನಕ್ಕೆ ಮತ್ತೂರಿನ ವೇ. ಶ್ರೀ ಕೇಶವ ಅವಧಾನಿ ವ್ಯಾಖ್ಯಾನ ನೀಡುವರು ಎಂದರು.

ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಸಿಂಡಿಕೇಟ್ ಸದಸ್ಯ ಡಾ. ಕೆ.ಎನ್. ಚಿದಾನಂದ ಸಮಾರೋಪ ಭಾಷಣ ಮಾಡುವರು. ಹಿರಿಯ ವ್ಯಾಖ್ಯಾನಕಾರ ಕಲಾಶ್ರೀ ಹೊಸಹಳ್ಳಿ ಗೋಪಾಲ ಅಧ್ಯಕ್ಷತೆ ವಹಿಸುವರು. ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉಪಸ್ಥಿತರಿರುವರು ಎಂದರು.

ಗಮಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಜಿಲ್ಲೆಯ ಕಲಾವಿದರಾದ ತಾರಾ ಪ್ರಸಾದ್, ನರಹರಿ ಶರ್ಮಾ ಹಾಗೂ ಕಾಮಾಕ್ಷಮ್ಮ ಜಗನ್ನಾಥ ಶಾಸ್ತ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಗೌರವ ಅಧ್ಯಕ್ಷ ಅಶ್ವತ್ ನಾರಾಯಣ ಶೆಟ್ಟಿ, ನಾಗರಾಜ್, ವತ್ಸಲ, ತಾರಾಪ್ರಸಾದ್, ಹರಿ ಪ್ರಸಾದ್, ಕುಮಾರ ಶಾಸ್ತ್ರಿ ಇದ್ದರು.

Leave a Reply

Your email address will not be published. Required fields are marked *