District NewsLatest NewsState News

ಐಟಿ ಪಾರ್ಕ್ ದುಸ್ಥಿತಿಗೆ ಸಚಿವರ ನಿರ್ಲಕ್ಷ್ಯವೇ ಕಾರಣ: ಡಿ.ಎಸ್. ಅರುಣ್ ಆರೋಪ

Share Below Link

ಶಿವಮೊಗ್ಗ: ರಾಜ್ಯದ ಮಾಹಿತಿ ತಂತ್ರಜ್ಞಾನ ಖಾತೆಯ ಜವಾಬ್ದಾರಿ ಹೊತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಆರ್‌ಎಸ್‌ಎಸ್ ಮತ್ತು ಹಿಂದುತ್ವದ ಬಗ್ಗೆ ಮಾಧ್ಯಮಗಳ ಎದುರು ಮಾತನಾಡುತ್ತಿದ್ದಾರೆಯೇ ಹೊರತು, ಯುವ ಎಂಜಿನಿಯರ್‌ಗಳ ಭವಿಷ್ಯದ ಆಶಾಕಿರಣವಾಗಿದ್ದ ಕಿಯೋನಿಕ್ಸ್ ಸಂಸ್ಥೆಯನ್ನು ಉಳಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ. ಒಂದು ವೇಳೆ ಅವರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಬಗ್ಗೆ ಆಸಕ್ತಿ ಇದ್ದರೆ, ಸಂಪೂರ್ಣವಾಗಿ ಮುಚ್ಚಿ ಹೋಗಿ ಪಾರಿವಾಳಗಳ ಗೂಡಾಗಿರುವ ಶಿವಮೊಗ್ಗದ ಐಟಿ ಪಾರ್ಕ್‌ನಲ್ಲಿರುವ ಕಿಯೋನಿಕ್ಸ್ ಘಟಕಕ್ಕೆ ತಕ್ಷಣ ಭೇಟಿ ನೀಡಬೇಕು. ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಯುವಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದ ಅಂಗಸಂಸ್ಥೆಯಾಗಿ 1976ರಲ್ಲಿ ಕಿಯೋನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ವಿಭಾಗದಲ್ಲಿ ಅಭಿವೃದ್ಧಿ ಸಾಧಿಸಲು ಶಿವಮೊಗ್ಗ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ಏಳು ಕಡೆ ಘಟಕಗಳನ್ನು ಸ್ಥಾಪಿಸಲಾಗಿತ್ತು. ವಾರ್ಷಿಕ ಸುಮಾರು 750 ಕೋಟಿ ರೂ. ವಹಿವಾಟು ನಡೆಸುತ್ತಾ ಸಂಸ್ಥೆ ಲಾಭದಲ್ಲಿತ್ತು. ಆದರೆ, ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಎಲ್ಲ ಘಟಕಗಳು ವಿವಾದಗಳ ಸುಳಿಗೆ ಸಿಲುಕಿ ಮುಚ್ಚುವ ಹಂತಕ್ಕೆ ಬಂದಿರುವುದು ಅವರ ನಿರ್ಲಕ್ಷ್ಯದ ಪ್ರತೀಕವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ 70 ಸಾವಿರ ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಐಟಿ ಪಾರ್ಕ್ ಸ್ಥಾಪನೆಯಾಗಿತ್ತು. ಇದರಿಂದ ಪ್ರತಿ ತಿಂಗಳು 15ರಿಂದ 20 ಲಕ್ಷ ರೂ. ಆದಾಯ ಬರುತ್ತಿತ್ತು. ಅನೇಕ ಐಟಿ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸಿ ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದವು. ಅಲ್ಲದೆ, 2013ರಿಂದ ಸರ್ಕಾರಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ 2.42 ಕೋಟಿ ರೂ. ದೇಣಿಗೆಯನ್ನೂ ನೀಡುತ್ತಾ ಬಂದ ಘಟಕವಾಗಿದೆ. ಆದರೆ, 2020-21ರ ಸಿಎಜಿ ಆಡಿಟ್ ವರದಿಯಲ್ಲಿ ಕಿಯೋನಿಕ್ಸ್ ವಾರ್ಷಿಕ ವಹಿವಾಟು 50 ಕೋಟಿ ರೂ.ಗೆ ಕುಸಿದಿರುವುದು ಆತಂಕಕಾರಿ ಸಂಗತಿ ಎಂದು ಕಿಡಿಕಾರಿದರು.

ಪ್ರಸ್ತುತ ಶಿವಮೊಗ್ಗದ ಐಟಿ ಪಾರ್ಕ್‌ನಲ್ಲಿ ಗಾಲಿಗರ್, ಮಿತ್ರ, ವರ್ಕ್‌ಫೋರ್ಸ್ ಮುಂತಾದ ಬೆರಳೆಣಿಕೆಯ ತಂತ್ರಜ್ಞಾನ ಕಂಪನಿಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಅವುಗಳಿಗೂ ಯಾವುದೇ ಎಸಿ ವ್ಯವಸ್ಥೆ ಇಲ್ಲದೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಮಳೆ ನೀರು ಒಳಗೆ ನುಗ್ಗುತ್ತಿದೆ. ವಿದ್ಯುತ್, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಪರವಾನಗಿ ನವೀಕರಿಸಲು ಅಗತ್ಯವಿರುವ ಆಕ್ಯುಪೆನ್ಸಿ ಸರ್ಟಿಫಿಕೇಟ್, ಸ್ಟ್ರಕ್ಚರಲ್ ಫಿಟ್‌ನೆಸ್ ಸರ್ಟಿಫಿಕೇಟ್ ಸೇರಿದಂತೆ ವಿವಿಧ ದಾಖಲೆಗಳು ಸಿಗುತ್ತಿಲ್ಲ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಚಾರಿಸಿದರೂ ಅವುಗಳ ಲಭ್ಯತೆ ಇಲ್ಲ ಎನ್ನುತ್ತಾರೆ. ‘ಐಟಿ ಬಿಯಾಂಡ್ ಕರ್ನಾಟಕ’ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ತನ್ನ ಮಾತನ್ನು ಎಲ್ಲಿ ಉಳಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಲು ಜಪಾನ್‌ಗೆ ತೆರಳಿದ್ದಾರೆ. ಆದರೆ, ತಮ್ಮದೇ ರಾಜ್ಯದಲ್ಲಿ ಐಟಿ ಉದ್ಯಮಗಳು ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿರುವುದು ಅವರ ಗಮನಕ್ಕೆ ಬರುತ್ತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗಂತೂ ಆರ್‌ಎಸ್‌ಎಸ್‌ನವರನ್ನು ಟೀಕಿಸಲು ಮಾಧ್ಯಮದವರನ್ನು ಕಂಡರೆ ಬಲು ಇಷ್ಟ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಯೋನಿಕ್ಸ್‌ನ ಮಾಜಿ ಸದಸ್ಯ ಪ್ರಶಾಂತ್ ಪಂಡಿತ್, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಿ. ಗೋಪಿನಾಥ್, ಮಂಜುನಾಥ್ ಎನ್. ಹಾಗೂ ಚಂದ್ರಶೇಖರ್ ಎಸ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *