ಪ್ರತಿಷ್ಠಿತ ಬಡಾವಣೆಯ ಕಾಲುವೆಯಲ್ಲಿ ನೀರು ಹರಿಯದೇ ದುರ್ನಾತ ಬೀರುತ್ತಿದೆ
ಶಿವಮೊಗ್ಗ: ನಗರದ ಮಧ್ಯ ಭಾಗದಲ್ಲಿರುವ ಪ್ರತಿಷ್ಠಿತ ಬಡಾವಣೆಗಳಾದ ರಾಜೇಂದ್ರ ನಗರ ಮತ್ತು ರವೀಂದ್ರ ನಗರ ಮಧ್ಯದಲ್ಲಿ ಹಾದುಹೋಗುವ ಕಾಲುವೆಯಲ್ಲಿ ನೀರು ಹರಿಯದೇ ನಗರದ ವಿವಿಧೆಡೆಯಿಂದ ಹರಿದು ಬರುತ್ತಿರುವ ಗಟಾರದ ತ್ಯಾಜ್ಯಗಳು ಮಾತ್ರ ಸಂಚಯಗೊಂಡಿದ್ದು, ಇಡೀ ಪ್ರದೇಶ ದುರ್ನಾತ ಬೀರುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ೧೪ ಕೋಟಿ ರೂ. ವೆಚ್ಚದಲ್ಲಿ ಅತ್ಯದ್ಭುತವಾದ ಪಾರ್ಕ್ ನಿರ್ಮಾಣ ಮಾಡಿದ್ದು, ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು. ಪಕ್ಕದಲ್ಲೇ ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಕೂಡ ಇದ್ದು, ಸುತ್ತಲೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಬಯಲು ರಂಗಮಂದಿರ ಕೂಡ ನಿರ್ಮಾಣಗೊಂಡು ಸ್ಥಳೀಯ ನಾಗರಿಕರಿಗೆ ಆಶಾಕಿರಣವಾಗಿತ್ತು. ಆದರೆ, ಈಗ ಚಾನಲ್ ನಲ್ಲಿ ನೀರು ಬಿಡದೇ ಇರುವುದರಿಂದ ಮತ್ತು ಮೇಲ್ಭಾಗದ ಪ್ರದೇಶಗಳಿಂದ ನೇರವಾಗಿ ಚಾನಲ್ ಗೆ ಒಳಚರಂಡಿ ನೀರು ಸೇರುತ್ತಿರುವುದರಿಂದ ಮತ್ತು ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳು ಶೇಖರಣೆಗೊಂಡಿರುವುದರಿಂದ ಸುಂದರವಾದ ಪಾರ್ಕ್ ಇದ್ದರೂ ಕೂಡ ಅಲ್ಲಿ ವಾಕಿಂಗ್ ಮಾಡಲು ಅಥವಾ ವಿಶ್ರಾಂತಿ ಪಡೆಯಲು ಆಗುತ್ತಿಲ್ಲ. ಕಾರಣ ಇಡೀ ಪ್ರದೇಶ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಆಶ್ರಯತಾಣವಾಗಿದೆ. ಅತಿ ಹೆಚ್ಚು ಜನರು ಸಾಂಕ್ರಾಮಿಕ ಕಾಯಿಲೆಗಳಿಂದ ನರಳುತ್ತಿದ್ದು, ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಹಲವು ಬಾರಿ ಪಾಲಿಕೆ ಆಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಉಪಯೋಗವಾಗಿಲ್ಲ.

ಅದಕ್ಕಾಗಿ ಸಾರ್ವಜನಿಕರು ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗುತ್ತಿದ್ದು, ನಗರಕ್ಕೆ ಆಗಮಿಸಿದ ಉಪ ಲೋಕಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ನಾಗರೀಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರವೀಂದ್ರನಗರ ಮತ್ತು ರಾಜೇಂದ್ರನಗರ ನಿವಾಸಿಗಳ ಸಂಘ ಒತ್ತಾಯಿಸಿದೆ.
