ಬಂಜಾರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ಬಂಜಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ಆಗಿದ್ದು, ಜಿಲ್ಲಾ ಬಂಜಾರ ಸಂಘದ ಎಲ್ಲಾ ಹೋರಾಟಗಳಿಗೆ ಬೆಂಬಲವಾಗಿ ತಾಲ್ಲೂಕು ಸಂಘ ನಿಲ್ಲಲಿದೆ ಎಂದು ನೂತನ ತಾಲ್ಲೂಕು ಅಧ್ಯಕ್ಷರಾದ ವಿನಾಯಕ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಬಂಜಾರ ಸಂಘ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ. ಹಿಂದಿನಿಂದಲೂ ಸದಾಶಿವ ಆಯೋಗದ ವರದಿ ವಿರುದ್ಧ ಹೋರಾಟ ಮತ್ತು ಒಳಮೀಸಲಾತಿಯಿಂದ ಸಮಾಜಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದು, ಬೆಂಗಳೂರು, ಬೆಳಗಾವಿ ಮತ್ತು ಶಿವಮೊಗ್ಗದ ಹೋರಾಟಗಳಲ್ಲಿ ಪಾಲ್ಗೊಂಡಿದೆ. ಅಲ್ಲದೆ ಈಗ ನಡೆಯುತ್ತಿರುವ ಸರ್ಕಾರದ ಒಳಮೀಸಲಾತಿ ಸಂಪುಟ ಸಚಿವರ ನಿರ್ಣಯದಲ್ಲಿ ಸಮಾಜದ ವಿರುದ್ಧ ತೀರ್ಮಾನವಾದರೆ ಅಥವಾ ಸಮಾಜಕ್ಕೆ ಆ ನಿರ್ಣಯ ಸಮಂಜಸವಾಗಿಲ್ಲದಿದ್ದರೆ ನ್ಯಾಯ ಸಿಗುವವರೆಗೆ ಹೋರಾಟ ಮಾಡಲಿದ್ದೇ ಎಂದು ತಿಳಿಸಿದರು.
ಎಬಿಸಿ ಪ್ರವರ್ಗ ಮಾಡಿದ ನಂತರ ಸಮಾಜದ ವಿದ್ಯಾವಂತರಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ. ಸರ್ಕಾರದ ಹಿಂದೆ ಇದ್ದ ವ್ಯವಸ್ಥೆಯನ್ನೇ ಮುಂದುವರಿಸಬೇಕು. ರೋಸ್ಟರ್ ಪದ್ಧತಿಯನ್ನು ಅಳವಡಿಸಬೇಕು. ಬಂಜಾರ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ 5ಶೇಕಡ ಮೀಸಲಾತಿ ನೀಡಿದ್ದು, ಅದರಲ್ಲಿ ಸಾಕಷ್ಟು ಗೊಂದಲವಿದೆ. ಉದ್ಯೋಗ ಸಿಗುವ ಲಕ್ಷಣ ಕಾಣುತ್ತಿಲ್ಲ. ಅದನ್ನೇ ಮುಂದುವರಿಸಿದರೆ ಉಗ್ರಹೋರಾಟ ಅನಿವರ‍್ಯ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ಬಂಜಾರ ಸಂಘದ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತ್ ನಾಯ್ಕ, ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ, ನಾಗೇಂದ್ರ, ಕಾರ್ಯದರ್ಶಿಯಾಗಿ ರಾಮು, ಸಹಕರ‍್ಯದರ್ಶಿಯಾಗಿ ಕುಮಾರ್ ನಾಯ್ಕ, ಖಜಾಂಚಿಯಾಗಿ ನೀಲ್ಯಾನಾಯ್ಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ನಾನ್ಯಾನಾಯ್ಕ, ರಾಮಾನಾಯ್ಕ, ಬಸವರಾಜ್ ನಾಯ್ಕ, ಮಂಜುನಾಥ್ ನಾಯ್ಕ, ಹೇಮೇಶ್ ನಾಯ್ಕ, ಗೋಪಿನಾಯ್ಕ, ಶಿವಾಜಿ ಕೆ.ಬಿ., ದಶರಥ ನಾಯ್ಕ, ದರ್ಶನ್, ತೀರ್ಥಾನಾಯ್ಕ, ಗೋವಿಂದನಾಯ್ಕ, ಮಂಜಾನಾಯ್ಕ, ಪರಮೇಶ್ ನಾಯ್ಕ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

