ಸಂತ ಸೇವಾಲಾಲ ಜಯಂತಿಯಲ್ಲಿ ‘ಕಮಲ-ಕೈ’ ಕೆಸರೆರಚಾಟ? – ಸೂರಗೊಂಡನಕೊಪ್ಪದಲ್ಲಿ ಭಕ್ತಿಭಾವಕ್ಕೆ ರಾಜಕೀಯ ಬಣ್ಣ!
ಶಿವಮೊಗ್ಗ: ಬಿಜೆಪಿಯ ಕೆಲ ಮಾಜಿ ಶಾಸಕರುಗಳು ಸೂರಗೊಂಡನಕೊಪ್ಪದಲ್ಲಿ ನಡೆದ ಸೇವಾ ಲಾಲರ 587ನೇ ಜಯಂತಿಯ ಸುಸಂದರ್ಭದಲ್ಲಿ ಚಿತಾವಣೆ ನಡೆಸಿ, ರಾಜಕೀಯ ಮಾಡಿದರು ಎಂದು ಬಂಜಾರ ಸಮಾಜದ ಮುಖಂಡ ಹಾಗೂ ಬಂಜಾರ ಸಮಾಜದ ಮಾಜಿ ತಾಲ್ಲೂಕು ಅಧ್ಯಕ್ಷ ಟಿ.ನಾನ್ಯಾನಾಯ್ಕ ಮಂಡೇನಕೊಪ್ಪ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.14ರಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ನಮ್ಮ ಜನಾಂಗದ ಶ್ರೀ ಸೇವಾಲಾಲರ 287ನೇ ಜಯಂತಿ ಕಾರ್ಯಕ್ರಮ ನಡೆಯಿತು. ಇದು ನಮ್ಮ ಸಮಾಜ ಹೆಮ್ಮೆ ಮತ್ತು ಸಂಭ್ರಮಪಡುವ ವಿಷಯ. ರಾಜ್ಯ ಸರ್ಕಾರವೇ ಈ ಜಯಂತಿ ಆಚರಣೆ ಮಾಡಲು ಕೋಟ್ಯಂತರ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿದೆ. ಸಮಾಜದ ಧಾರ್ಮಿಕ ಕೇಂದ್ರವಿದು. ಸೇವಾಲಾಲರ ಆದರ್ಶಗಳು ಮತ್ತು ಸಮಾಜದ ಪರಂಪರೆ, ಸಾಂಸ್ಕೃತಿಕ ಹಿನ್ನಲೆ ಬಹಳ ಮುಖ್ಯವಾಗುತ್ತದೆ. ಅಲ್ಲದೆ ಗಣ್ಯರು ಇಲ್ಲಿ ಉಪನ್ಯಾಸ, ಸಂದೇಶ ನೀಡುತ್ತಾರೆ. ಆದರೆ ಇಂತಹ ಸಭೆಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ಕೆಲ ಬಿಜೆಪಿ ನಾಯಕರು ಮಾಡಿದ್ದಾರೆ ಎಂದರು.
ಬಿಜೆಪಿ ಮಾಜಿ ಶಾಸಕರುಗಳಾದ ಪಿ.ರಾಜೀವ್ ಮತ್ತು ಕೆ.ಬಿ.ಅಶೋಕ್ನಾಯ್ಕ್ ಸೇರಿದಂತೆ ಹಲವರು ಈ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಚಿತಾವಣೆ ನಡೆಸಿ, ಧಾರ್ಮಿಕ ಸಭೆಯನ್ನು ರಾಜಕೀಯಗೊಳಿಸಿದ್ದಾರೆ. ಇದು ನಮ್ಮ ಸಮಾಜಕ್ಕೆ ನಾಚಿಕೆ ಮತ್ತು ಅಸಹ್ಯ ಪಡುವಂತ್ತದ್ದು ನಮ್ಮ ಸಮಾಜದ ಸಮಸ್ಯೆಗಳು ಏನೇ ಇರಲಿ, ಅದನ್ನು ಮಾತನಾಡಲು ಬೇರೆ ಬೇರೆ ವೇದಿಕೆಗಳು ಇರುತ್ತೇವೆ. ಹೋರಾಟಗಳು ಇರುತ್ತವೆ. ಆದರೆ ಇಂತಹ ಒಂದು ಒಳ್ಳೆಯ ಸಂದರ್ಭದಲ್ಲಿ ಈ ರೀತಿ ಮಾಡಿರುವುದು ಸರಿಯಲ್ಲ ಎಂದರು.
ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ರವರು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಅವಮಾನ ಮಾಡಿಸಲು ಕಪ್ಪುಪಟ್ಟಿಧರಿಸಿ ನಿಂಧಿಸಿದ್ದು ಸರಿಯಲ್ಲ, ಇದಕ್ಕಾಗಿ ನಾವುಗಳು ವಿಷಾಧ ವ್ಯಕ್ತಪಡಿಸುತ್ತೇವೆ. ಮತ್ತು ಬಿಜೆಪಿಯ ಈ ಮಾಜಿ ಶಾಸಕರುಗಳು ಕೂಡ ನಮ್ಮ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದರು.
ನಮ್ಮ ಸಮಾಜದ ಮೀಸಲಾತಿ ವಿಷಯಕ್ಕೆ ಸಂಬಂಧಪಟ್ಟಂತೆ ವರ್ಗೀಕರಣ ಹಂಚಿಕೆ ತಪ್ಪಾಗಿದ್ದರೆ ಇದನ್ನು ಪ್ರಶ್ನೆಮಾಡಲು ಬೇರೆಯೇ ಮಾರ್ಗಗಳಿವೆ. ಬೇಕಾದರೆ ನ್ಯಾಯಾಲಯಕ್ಕೂ ಹೋಗಬಹುದು. ಚುನಾವಣೆಯ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷಗಳು ನಮ್ಮ ವಿರುದ್ಧ ತಪ್ಪುನಿರ್ಧಾರ ಕೈಗೊಂಡರೆ ಅವರಿಗೆ ತಕ್ಕಶಾಸ್ತೀ ಮಾಡಬಹುದು. ಅದಕ್ಕೆ ನಾವೂ ಜೊತೆಗೂಡುತ್ತೇವೆ. ಆದರೆ ಅದನ್ನು ಬಿಟ್ಟು ನಮ್ಮೆಲ್ಲರ ಆದ್ಯ ಧೈವತ್ವವಾದ ಸಂತಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ ಜಯಂತಿಯ ಸುಸಂದರ್ಭದಲ್ಲಿ ಈ ರೀತಿ ವರ್ತಿಸಿದ್ದು ಸರಿಯಲ್ಲ. ಇನ್ನಾದರೂ ಇವರುಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಕುಂಚೇನಹಳ್ಳಿಯ ಎಸ್.ಡಿ. ಶಿವಾನಾಯ್ಕ, ಬನ್ನಿಕೆರೆಯ ಹೆಚ್. ಚಂದ್ರಾನಾಯ್ಕ, ದುಮ್ಮಳ್ಳಿಯ ಮಂಜಾನಾಯ್ಕ ಇದ್ದರು.

