ದಲಿತರಿಂದ ಯಡಿಯೂರಪ್ಪ ಮನೆ ಮುತ್ತಿಗೆ…? – ಬಿ ವೈ ವಿಜೇಯೇಂದ್ರಗೆ KPCCಯ DSS ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಕೆ
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಹೆಸರಿನಲ್ಲಿ ಸಚಿವ ಆರ್.ವಿ. ತಿಮ್ಲಾಪುರ ಅವರ ರಾಜೀನಾಮೆ ಕೇಳಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ದ್ವೇಷದಿಂದ ಪ್ರೇರಿತವಾಗಿದೆ ಎಂದು KPCC ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡ ಈ ಭಾರಿ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಘೋಷಣೆಗಳ ಮಧ್ಯೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ರೈತರ ಸಂಕಷ್ಟ, ಮಹಿಳೆಯರ ಸುರಕ್ಷತೆ, ಜನರ ಬದುಕಿನ ಪ್ರಶ್ನೆಗಳು—ಇವುಗಳ ಬಗ್ಗೆ ಮೌನವಾಗಿರುವ ವಿರೋಧ ಪಕ್ಷಗಳು ಈಗ ಒಬ್ಬ ಅಧಿಕಾರಿ ಲಂಚ ಪ್ರಕರಣವನ್ನು ಹಿಡಿದು ಸಚಿವರ ಮೇಲೆ ಹೊಣೆ ಹೊರೆಸಲು ಮುಂದಾಗಿವೆ. ಇದು ನ್ಯಾಯವಲ್ಲ, ನೇರ ರಾಜಕೀಯ ನಾಟಕ,” ಎಂದು ಕಿಡಿಕಾರಿದರು.
“ದೇಶದ ಅನೇಕ ಇಲಾಖೆಗಳಲ್ಲೂ ಪ್ರತಿದಿನ ಲಂಚ ಹಾಗೂ ಅಕ್ರಮಗಳ ಸುದ್ದಿಗಳು ಹೊರಬರುತ್ತಿವೆ. ಆಗ ಯಾವ ಸಚಿವರೂ ರಾಜೀನಾಮೆ ನೀಡಿಲ್ಲ. ಆದರೆ ತಿಮ್ಲಾಪುರ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಅವರು ದಲಿತ ನಾಯಕರು ಎಂಬ ಕಾರಣಕ್ಕೇ ಗುರಿಯಾಗಿಸಲಾಗಿದೆ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ,” ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲೂ ಹಿಂದೆ ಹಗರಣದ ಆರೋಪಗಳು ಕೇಳಿಬಂದಾಗ ರಾಜೀನಾಮೆ ಪ್ರಶ್ನೆಯೇ ಏಳಲಿಲ್ಲ ಎಂದು ಟೀಕಿಸಿದ ಅವರು, “ದಲಿತರು, ವಿಶೇಷವಾಗಿ ಮಾದಿಗ ಸಮಾಜವನ್ನು ತಗ್ಗಾಗಿ ನೋಡುವ ಮನೋಭಾವವನ್ನು ತಕ್ಷಣ ಬಿಡಬೇಕು. ನಮ್ಮ ಸಮಾಜದ 50–60 ಲಕ್ಷ ಜನರ ಸಹನೆಯನ್ನು ದುರ್ಬಲತೆ ಎಂದು ಭಾವಿಸಬೇಡಿ. ಅನ್ಯಾಯ ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಜ್ವಾಲೆ ಎದ್ದೇಳಲಿದೆ,” ಎಂದು ಎಚ್ಚರಿಕೆ ನೀಡಿದರು.
ತಿಮ್ಲಾಪುರ ಅವರು ಪರಿಶಿಷ್ಟ ಜಾತಿಯವರ ಏಳಿಗೆಗಾಗಿ ಹಲವು ಮೀಸಲಾತಿ ಕ್ರಮಗಳನ್ನು ಜಾರಿಗೆ ತಂದಿದ್ದು, ಅವರ ಇಲಾಖೆಯಲ್ಲಿ ಸುಮಾರು 625 ಲೈಸೆನ್ಸ್‌ಗಳನ್ನು ಮೀಸಲಿಟ್ಟಿರುವುದು ಸಾಮಾಜಿಕ ನ್ಯಾಯದ ಹೆಜ್ಜೆ ಎಂದು ಅವರು ಹೇಳಿದರು.
“ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆಯವರೂ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರೂ ಆಗಿದ್ದಾರೆ ಎಂಬುದನ್ನು ಮರೆಯಬಾರದು. ಯಡಿಯೂರಪ್ಪ ಅವರು ಜನಪರ ಹೋರಾಟಗಳಿಂದಲೇ ಶ್ರೇಷ್ಠ ನಾಯಕತ್ವವನ್ನು ಗಳಿಸಿದ್ದರು. ರಾಷ್ಟ್ರೀಯ ಪಕ್ಷದ ರಾಜ್ಯ ನಾಯಕನಾಗಿ ಅದಕ್ಕೆ ತಕ್ಕ ಜವಾಬ್ದಾರಿಯುತ ನಡೆ ತೋರಬೇಕು,” ಎಂದು ತರಾಟೆಗೆ ತೆಗೆದುಕೊಂಡರು.
ಮುಂದುವರಿದು ಅವರು, “ವಿಜಯೇಂದ್ರರಿಗೆ ಶಿವಮೊಗ್ಗ, ಬೆಂಗಳೂರು, ಶಿಕಾರಿಪುರದಲ್ಲಿ ಮನೆಗಳಿರಬಹುದು. ಆದರೆ ನಮ್ಮ ಮಾದಿಗ ಸಮಾಜ ರೊಚ್ಚಿಗೆದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂಬುದನ್ನು ಅರಿತುಕೊಳ್ಳಿ. ಆದರೂ 30–40 ವರ್ಷಗಳ ಹೋರಾಟದ ಇತಿಹಾಸ ಹೊಂದಿರುವ ನಾವು ಯಾವತ್ತೂ ಹಿಂಸೆಗೆ ಮೊರೆ ಹೋಗಿಲ್ಲ; ಯಾರ ಮನೆಯ ಮೇಲೂ ಕಲ್ಲು ತೂರಿಲ್ಲ, ಧ್ವಜ ಕೀಳಿಲ್ಲ,” ಎಂದು ಸ್ಪಷ್ಟಪಡಿಸಿದರು.
“ಹೋರಾಟದ ಕಿಚ್ಚು ನಮಗಿದೆ, ಆದರೆ ಅದು ಸದಾ ಕಾನೂನಿನ ಚೌಕಟ್ಟಿನೊಳಗೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ನಮ್ಮ ದಿಕ್ಕು. ವಿರೋಧ ಪಕ್ಷಗಳೂ ಕಾನೂನಿನ ಮಿತಿಯಲ್ಲಿ ನಡೆದುಕೊಳ್ಳಬೇಕು. ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಸಚಿವ ತಿಮ್ಲಾಪುರ ಅವರ ರಾಜೀನಾಮೆ ಕೇಳುವುದು ಅಸಂಬದ್ಧ. ಹೋರಾಟಗಳು ನ್ಯಾಯಸಮ್ಮತವಾಗಿರಲಿ,” ಎಂದು ಮಂಜುನಾಥ್ ಗುಡುಗಿದರು”

