ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಜಾತ್ರೆ ಫೆ.24ರಿಂದ 28ರವರೆಗೆ: ಐದು ದಿನಗಳ ವೈಭವಕ್ಕೆ ಸಜ್ಜಾದ ಭಕ್ತ ಸಾಗರ!
ಶಿವಮೊಗ್ಗ: ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಫೆ.24ರಿಂದ 28ರ ವರೆಗೆ ಐದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹೇಳಿದರು.
ಅವರು ಇಂದು ದೇವಸ್ಥಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ಕೆಳದಿ ಶಿವಪ್ಪನಾಯಕ ಅರಸರ ಕಾಲದಿಂದಲೂ ಈ ಹಬ್ಬ ಇಂದಿನವರೆಗೆ ಪ್ರತೀ ಎರಡು ವರ್ಷಕ್ಕೊಮ್ಮೆ ಅತ್ಯಂತ ಸಡಗರ-ಸಂಭ್ರಮದಿಂದ ಭಾವೈಕ್ಯತೆಯಿಂದ ಎಲ್ಲಾ ಸಮಾಜದ ಸಹಕಾರದೊಂದಿಗೆ ಆಚರಿಸುತ್ತಾ ಬಂದಿದ್ದು, ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದೆ ಎಂದರು.
ಈ ಹಬ್ಬವು ಫೆ.24ರಿಂದ ಆರಂಭಗೊಳ್ಳುತ್ತದೆ. ಅಂದು ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಸಮಿತಿವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಸಮಾಜದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಡನೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ಮಾಡಿ, ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಮಂಗಳವಾರ ರಾತ್ರಿ 9 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಿಲಕ್ಕಿ ನೀಡಿ, ಉಡಿತುಂಬಿ ಪೂಜೆ ಸಲ್ಲಿಸುತ್ತಾರೆ. ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಉಪ್ಪಾರ ಸಮಾಜದವರು ಗದ್ದುಗೆಗೆ ತರುತ್ತಾರೆ. ಇದರ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತ ಸಮಾಜದವರು ಗಂಗೆಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ ಎಂದರು.
ಗಾಂಧಿಬಜಾರಿನಲ್ಲಿ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿದಾಗ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲಿ ಜಾಗ ತುಂಬಾ ಕಡಿಮೆ ಇರುವುದರಿಂದ ನೂಕು-ನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಅಂಗವಿಕಲರಿಗೆ, ವಯಸ್ಸಾದವರಿಗೆ ವಿಶೇಷ ಮಾರ್ಗವನ್ನು ಕಲ್ಪಿಸಲಾಗುವುದು. ಭಕ್ತಾಧಿಗಳಿಗೆ ಮಡಿಲಕ್ಕಿ, ಸೀರೆ ತೆಗೆದುಕೊಳ್ಳಲು ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಕಡೆ ಸಿಸಿ ಟಿ.ವಿಯನ್ನು ಅಳವಡಿಸಲಾಗುವುದು ಎಂದರು.
ಬುಧವಾರ ಬೆಳಿಗ್ಗೆ 4ಗಂಟೆಗೆ ಹರಿಜನ ಸಮಾಜದವರು ಅಂದರೆ ವಿದ್ಯಾನಗರದ ಕರ್ಲಟ್ಟಿ ಬಾಂಧವರು ಬೇವಿನುಡಿಗೆಯೊಂದಿಗೆ ಆಗಮಿಸಿ, ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯಮಾಡಿ ಪೂಜೆ ಸಲ್ಲಿಸುತ್ತಾರೆ. ಅಂದು ಬೆಳಿಗ್ಗೆ 6 ರಿಂದ ರಾತ್ರಿ 10-30ರ ವರೆಗೂ ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯು ಸರದಿಯಂತೆ ನಾಲ್ಕು ದಿನಗಳ ಕಾಲವೂ ನಡೆಯುತ್ತದೆ ಎಂದರು.
ಫೆ.28ರ ರಾತ್ರಿ 7ಗಂಟೆಗೆ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಲಕ್ಷಾಂತರ ಜನರ ಮತ್ತು ಭಕ್ತರ ಅತ್ಯಂತ ಸಂಭ್ರಮದಿಂದ ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಅಮ್ಮನವರನ್ನು ಮಧ್ಯರಾತ್ರಿ ವನಕ್ಕೆ ತೆಗೆದುಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರವನ್ನು ನಡೆಸಿ, ಪೂಜೆ ಸಲ್ಲಿಸಿ ವನದಿಂದ ಹಿಂದಿರುಗುತ್ತಾರೆ ಎಂದು ಹಬ್ಬದ ವಿಶೇಷತೆಗಳನ್ನು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮತ್ತಷ್ಟು ವಿವರಣೆ ನೀಡಿ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಹಿನ್ನಲೆಯಲ್ಲಿ ಫೆ.24ರಿಂದ 27ರ ವರೆಗೆ ಈ ಬಾರಿ ಗಾಂಧಿಬಜಾರಿನ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಪ್ರತಿದಿನ ಸಂಜೆ 5ರಿಂದ 9.30ರ ವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.24ರಂದು ಶಿವಮೊಗ್ಗದ ಝೇಂಕಾರ್ ಮೇಲೋಡೀಸ್‌ನಿಂದ ಸುಗಮ ಸಂಗೀತ, ಫೆ.25ರಂದು ಮನು ಕಲಾಕೇಂದ್ರದವರಿಂದ ಭರತನಾಟ್ಯ, ಶಾಂತ ಆನಂದ್ ಅವರಿಂದ ಸುಗಮ ಸಂಗೀತ, 26ರಂದು ಕೂಡ ಶ್ವೇತಾ ಪ್ರಕಾಶ್ ಮತ್ತು ನಾಗರತ್ನ ಸಂಗಡಿಗರಿಂದ ಕಾರ್ಯಕ್ರಮ ವಿಶೇಷವಾಗಿ ಫೆ.27ರಂದು ಸುರೇಖಾ ಹೆಗಡೆ, ಶಶಿಕಿರಣ್ ಹಾಗೂ ದೂರದರ್ಶನ ಕಲಾವಿದರಿಂದ ಸವಿನೆನಪು ಎಂಬ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ಇದಾದ ಮೇಲೆ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಮಾರ್ಚ್ 6ರಿಂದ ಮಾರ್ಚ್8ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈ ಪಂದ್ಯಾವಳಿ ರಾಷ್ಟ್ರಮಟ್ಟದ್ದಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಪೈಲ್ವಾನರುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಕುಸ್ತಿ ಸಮಿತಿಯನ್ನು ರಚಿಸಲಾಗಿದೆ. ಅವರು ಈ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ ಎಂದರು.
ಈ ಬಾರಿಯ ವಿಶೇಷತೆಗಳು:-
ಈ ಬಾರಿ ಅಮ್ಮನವರಿಗೆ ಬಂಗಾರದ ಮುಖವಾಡವನ್ನು ತಯಾರಿಸಲಾಗಿದೆ. ಸುಮಾರು 1ಕೆ.ಜಿ. 600ಗ್ರಾಂ ತೂಕದ ಅಮ್ಮನವರ ಮುಖವಾಡವನ್ನು ಈ ಬಾರಿ ಅಮ್ಮನವರಿಗೆ ತೊಡಿಸಲಾಗುವುದು. ಇದರ ಜೊತೆಗೆ ಸುಮಾರು 16 ಕೆ.ಜಿ. ಬೆಳ್ಳಿಯ ಬಾಗಿಲನ್ನು ಗರ್ಭಗುಡಿ ಬಾಗಿಲಿಗೆ ಜೋಡಿಸಲಾಗುವುದು. ಇದು ಅಮ್ಮನವರನ್ನು ಕಣ್ತುಂಬಿಕೊಳ್ಳಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಯಾವ ಭಕ್ತಾದಿಗಳಿಗೂ ಸರತಿಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಿಂದ ಬಳಲುಬಾರದು ಎಂಬ ಕಾರಣಕ್ಕಾಗಿ ಶಿವಪ್ಪನಾಯಕ ಮಹದ್ವಾರದಿಂದ ಮತ್ತು ಕರ್ನಾಟಕ ಸಂಘದ ಬಳಿಯಿಂದ ಜರ್ಮನ್ ಟೆಂಟ್ ಹಾಕಲಾಗುವುದು. ಶಾಮೀಯಾನ ಕೂಡ ಹಾಕಲಾಗುತ್ತದೆ. ಇದರ ಜೊತೆಗೆ ಗಾಂಧಿಬಜಾರಿನ ಮಹಾದ್ವಾರದಲ್ಲಿ ಸುಮಾರು 22 ಅಡಿ ಎತ್ತರದ ಕಾಳಿ ದೇವಿಯ ಮೂರ್ತಿಯನ್ನು ಅಲಂಕರಿಸಿ ನಿರ್ಮಿಸಲಾಗುವುದು. ಜೊತೆಗೆ ಇಡೀ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ವಿದ್ಯುತ್ ಅಲಂಕಾರವನ್ನು ಮಾಡಲಾಗುವುದು. ಅಲ್ಲದೆ ಸಂಸ್ಕಾರಕ್ಕೆ ತೊಂದರೆಯಾಗದಂತೆ ನಗರದೆಲ್ಲೆಡೆ ಸಂಘ-ಸಂಸ್ಥೆಗಳು, ಫ್ಲೆಕ್ಸಿಯನ್ನು ಹಾಕಬಹುದಾಗಿದ್ದು, ಮಹಾನಗರ ಪಾಲಿಕೆಯವರು ಯಾವ ಕಾರಣಕ್ಕೂ ಈ ಫ್ಲೆಕ್ಸಿಯನ್ನು ತೆಗೆಯಬಾರದು ಎಂದು ಈಗಾಗಲೇ ಮನವಿ ಮಾಡಿದ್ದೇವೆ. ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಸಮಿತಿಯವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಎನ್. ಉಮಾಪತಿ, ಎಂ.ಕೆ. ಸುರೇಶ್‌ಕುಮಾರ್, ಕೋಶಾಧ್ಯಕ್ಷ ಹೆಚ್.ವಿ. ತಿಮ್ಮಪ್ಪ, ಕಾರ್ಯದರ್ಶಿಗಳಾದ ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸಹಕಾರ್ಯದರ್ಶಿಗಳಾದ ಸೀತಾರಾಮ್‌ನಾಯಕ್, ಎ.ಹೆಚ್. ಸುನೀಲ್, ಟಿ.ಎಸ್. ಚಂದ್ರಶೇಖರ್, ಪೂಜಾ ಸಂಚಾಲಕರುಗಳಾದ ಸತ್ಯನಾರಾಯಣ್, ಪಿ.ಸಿ. ಲಿಂಗರಾಜ್, ಎಸ್.ಜಿ. ಪ್ರಭಾಕರ್, ನಿರ್ದೇಶಕರುಗಳಾದ ಎನ್. ಶ್ರೀಧರಮೂರ್ತಿ ನವುಲೆ, ಎಲ್. ಚಂದ್ರಶೇಖರ್, ವಿ.ರಾಜು, ಹೆಚ್.ಬಿ. ಪ್ರಕಾಶ್, ಹೆಚ್.ಟಿ. ವಾಸುದೇವ್, ಎಸ್.ಜಿ. ತುಕ್ಕೋಜಿರಾವ್, ಎನ್. ಶ್ರೀಧರ್ ನಾಡಿಗ್, ಎಸ್. ಶಿವು, ಎಸ್.ಸುಧೀರ್, ಸೋಮಶೇಖರ್ ನಾಡಿಗ್, ಹರೀಶ್‌ಲಾಲ್, ಪ್ರಮುಖರಾದ ಕೆ.ವಿ. ಅಣ್ಣಪ್ಪ, ಮಂಜುನಾಥ್‌ಬಾಬು ಸೇರಿದಂತೆ ಹಲವರಿದ್ದರು.
ಮುಖ್ಯಾಂಶಗಳು:-
- ಫೆ.24ರಿಂದ 28ರ ವರೆಗೆ ಐದು ದಿನಗಳ ಜಾತ್ರಾ ಮಹೋತ್ಸವ.
- ಫೆ.24ರ ಮಂಗಳವಾರ ಬೆಳಿಗ್ಗೆ 5.30ರಿಂದ ಮಾರಿ ಗದ್ದುಗೆಯಲ್ಲಿ ಎಡೆಪೂಜೆ ಆರಂಭ.
- ಬೆಳಿಗ್ಗೆ 7ಗಂಟೆಯಿಂದ ತವರುಮನೆ ಗಾಂಧಿಬಜಾರ್‌ನಲ್ಲಿ ಅಮ್ಮನವರಿಗೆ ಮಡಿಲಕ್ಕಿ ಅರ್ಪಣೆ.
- ರಾತ್ರಿ 9ಕ್ಕೆ ತವರುಮನೆಯಿಂದ ಗದ್ದುಗೆಗೆ ಪ್ರವೇಶ.
- ಶ್ರೀದೇವಿ ದೇವಸ್ಥಾನದಲ್ಲಿ ಫೆ.25ರಿಂದ 28ರ ವರೆಗೆ ಪ್ರತಿದಿನ ಪೂಜೆ, ಹರಕೆ, ಪ್ರಸಾದ ವಿನಿಯೋಗ.
- ಫೆ.28ರ ರಾತ್ರಿ 6.30ಕ್ಕೆ ಮಹಾಮಂಗಳಾರತಿ.
- ಫೆ.28ರಂದು ಅಮ್ಮನವರ ರಾಜಬೀದಿ ಉತ್ಸವ, ರಾತ್ರಿ 7ಕ್ಕೆ ವನಪ್ರವೇಶ.
- ಫೆ.24ರಿಂದ 27ರ ವರೆಗೆ ರಾಮಣ್ಣಶ್ರೇಷ್ಠಿ ಪಾರ್ಕಿನಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.
- ಮಾ.6ರಿಂದ 8ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ ಪಂದ್ಯಾವಳಿ.
- ಈ ಬಾರಿ ಅಮ್ಮನವರಿಗೆ 1.60 ಕೆ.ಜೆ. ಬಂಗಾರದ ಮುಖವಾಡ.
- 16ಕೆ.ಜಿ. ತೂಕದ ಬೆಳ್ಳಿ ಬಾಗಿಲು.
- ಗಾಂಧಿಬಜಾರಿನ ಮಹಾದ್ವಾರದಲ್ಲಿ 22 ಅಡಿ ಎತ್ತರದ ಕಾಳಿಕಾ ದೇವಿಯ ಮೂರ್ತಿ.
- ಇಡೀ ನಗರದಲ್ಲಿ ವಿದ್ಯುತ್ ದೀಪಾಲಂಕಾರ.
- ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ.
- ನಗರದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಳಿಗೆ ಸಮಿತಿಯವರು ಜವಾಬ್ದಾರರಲ್ಲ.
- ಯಾರಿಗೂ ಯಾವುದೇ ಪಂದ್ಯಾವಳಿ, ಕ್ರೀಡೆಗಳನ್ನು ನಡೆಸುವಂತೆ ಸಮಿತಿ ಹೇಳಿಲ್ಲ.

