Crime NewsDistrict NewsLatest NewsNational-International NewsOthersState News

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ವಿರುದ್ಧ ಕರವೇ ಜನಮನ ರಾಜ್ಯ ಸಂಘಟನೆಯ ಪ್ರತಿಭಟನೆ

Share Below Link

ಶಿವಮೊಗ್ಗ: ಮೆಗ್ಗಾನ್ ವೈದ್ಯಕೀಯ ಬೋಧನ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ಭ್ರಷ್ಟಾಚಾರ, ವಿಳಂಬ ನೀತಿ ಹಾಗೂ ಸಿಬ್ಬಂದಿಗಳ ತಾತ್ಸಾರ ವರ್ತನೆ ವಿರುದ್ಧ ಕರವೇ ಜನಮನ ರಾಜ್ಯ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಯಿತು.

ರಾಜ್ಯಾಧ್ಯಕ್ಷ ಕೆ. ಜನಾರ್ಧನ ಸಾಲಿಯಾನ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಆಸ್ಪತ್ರೆಯ ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಮಾಲತೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್ ಕೆ., ರಾಮಣ್ಣ ರಾಗಿಗುಡ್ಡ, ಪಾರ್ಥಿಬನ್, ಜಿಲ್ಲಾ ಸಂಚಾಲಕ ಹರ್ಷಿತ್ ಭಾರದ್ವಾಜ್, ತಾಲೂಕು ಸಂಚಾಲಕ ಪ್ರತಾಪ್ ಸೇರಿದಂತೆ ಶೋಭಾ, ಪುಷ್ಪ, ಲಕ್ಷ್ಮೀಶ, ಸಂಗೇಶ್ವರ ಹಾಗೂ ಹಲವರು ಭಾಗವಹಿಸಿದ್ದರು.

ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ರೋಗಿಗಳ ನೋಂದಣಿ ವ್ಯವಸ್ಥೆಯಲ್ಲಿನ ಗೊಂದಲ, ಆನ್‌ಲೈನ್ ನೋಂದಣಿ ವ್ಯವಸ್ಥೆಯ ವೈಫಲ್ಯ ಹಾಗೂ ಗಂಟೆಗಟ್ಟಲೆ ಕಾಯಿಸುವ ಕ್ರಮದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿದರು. ವಿಶೇಷವಾಗಿ ಎಂ.ಆರ್‌.ಐ ಸ್ಕ್ಯಾನಿಂಗ್‌ಗಾಗಿ ತಿಂಗಳಾನುಗಟ್ಟಲೆ ದಿನಾಂಕ ನೀಡಲಾಗುತ್ತಿರುವುದು ಹಾಗೂ ಲಂಚ ನೀಡಿದವರಿಗೆ ಮಾತ್ರ ಬೇಗ ಸೇವೆ ಸಿಗುತ್ತಿರುವ ಆರೋಪಗಳನ್ನು ಅವರು ಮಾಡಿದರು.

ಬಾಣಂತಿಯರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಭೀತಿ ಜನರಲ್ಲಿ ಇದೆ ಎಂದು ಸಂಘಟನೆ ಆರೋಪಿಸಿದ್ದು, ಪಾರದರ್ಶಕತೆಯನ್ನು ಕಾಪಾಡಲು ಜನನವಾದ ಮಗುವನ್ನು ತಕ್ಷಣ ಕುಟುಂಬದವರಿಗೆ ತೋರಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದೆ.

ಔಷಧಿ ವಿತರಣೆಯಲ್ಲಿ ಅಕ್ರಮಗಳು ನಡೆಯುತ್ತಿರುವುದಾಗಿ ಆರೋಪಿಸಿದ ಸಂಘಟನೆ, ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿದ್ದರೂ ರೋಗಿಗಳನ್ನು ಖಾಸಗಿ ಮೆಡಿಕಲ್ ಅಂಗಡಿಗಳಿಗೆ ಕಳುಹಿಸಿ ಕಮಿಷನ್ ಪಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಔಷಧಿಗಳ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕೆಂದು ತಿಳಿಸಿದೆ.

ಬಿಲ್ಲಿಂಗ್ ಕೌಂಟರ್‌ಗಳನ್ನು ಹೆಚ್ಚಿಸಿ, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಸೇವೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಸೇವಾ ಸಮಯದಲ್ಲಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ತಡೆಯುವಂತೆ ಆಡಳಿತ ವರ್ಗಕ್ಕೆ ಮನವಿ ಮಾಡಲಾಗಿದೆ.

ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣ ಸರಿಪಡಿಸದಿದ್ದರೆ ರೋಗಿಗಳ ಪರವಾಗಿ ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ. ಪ್ರತಿಭಟನೆಯ ನಂತರ ಆಸ್ಪತ್ರೆಯ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *