ಫೆ.18: ಛತ್ರಪತಿ ಶಿವಾಜಿ ಮಹಾರಾಜ ಅವರ ವಿಜೃಂಭಣೆಯ 399ನೇ ಜಯಂತೋತ್ಸವ – ರಮೇಶ್ ಬಾಬು ಜಾದವ್
ಶಿವಮೊಗ್ಗ : ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಮತ್ತು ಇತರ ಮರಾಠ ಸಂಘಟನೆಗಳು ಹಾಗೂ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆ.19ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತೋತ್ಸವವನ್ನು ಆಯೋಜಿಸಲಾಗಿದೆ ಎಂದು ಮರಾಠ ಟ್ರಸ್ಟಿನ ಉಪಾಧ್ಯಕ್ಷ ರಮೇಶ್ ಬಾಬು ಜಾದವ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಸರ್ವಶ್ರೇಷ್ಠ ರಾಜರಾಗಿದ್ದರು. ಧೈವಭಕ್ತಿ, ದೇಶಭಕ್ತಿ, ಆಚಾರಶೀಲ, ವಿಚಾರಶೀಲ, ನ್ಯಾಯಶೀಲ ಮುಂತಾದವುಗಳಿಗೆ ಅವರು ಪ್ರಸಿದ್ಧರಾಗಿದ್ದಾರೆ. ಸಮರ್ಥ ಆಡಳಿತ ನಡೆಸಿದವರು ಇಂತಹವರ ಜಯಂತಿಯನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಜಿಲ್ಲಾಡಳಿತದ ಸಹಕಾರದಲ್ಲಿ ನಡೆಯುವ ಈ ಉತ್ಸವಕ್ಕೆ ಮರಾಠ ಪರಿಷತ್ತು, ಮರಾಠ ಟ್ರಸ್ಟ್, ಮರಾಟ ಮಹಿಳಾ ಮಂಡಳಿ, ಮರಾಠ ಪತ್ತಿನ ಸಹಕಾರ ಸಂಘ ಸೇರಿದಂತೆ ಸಮಾಜದ ಎಲ್ಲಾ ಉಪಪಂಗಡಗಳು ಇದರಲ್ಲಿ ಭಾಗವಹಿಸುತ್ತವೆ ಎಂದರು.
ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 11ಗಂಟೆಗೆ ಸಚಿವ ಎಸ್. ಮಧುಬಂಗಾರಪ್ಪ ಉದ್ಘಾಟಿಸುವರು, ವಿಶೇಷ ಆಹ್ವಾನಿತರಾಗಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಭಾಗವಹಿಸುವರು. ಹಾಗೆಯೇ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಅಧಿಕಾರಿಗಳ ವರ್ಗದವರು ಉಪಸ್ಥಿತರಿರುತ್ತಾರೆ ಎಂದರು.
ವಿಶೇಷ ಉಪನ್ಯಾಸವನ್ನು ತೀರ್ಥಹಳ್ಳಿಯ ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಲೋಹಿತಾಶ್ವ ಕೇದಿಗ್ಗೆರೆ ನೀಡುವರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಮರಾಠ ಸಮಾಜದ ಎಲ್ಲಾ ಮುಖಂಡರು, ಉಪಪಂಗಡಗಳ ಮುಖಂಡರುಗಳು, ಹಿಂದೂ ಭಾಂದವರು ಆಗಮಿಸಬೇಕು ಎಂದು ಅವರು ಕೋರಿದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ 400ನೇ ಜಯಂತೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪೂರ್ವತಯಾರಿಗಳು ನಡೆಯುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರರಾವ್ ಘಾರ್ಗೆ, ಸಿದ್ಧೋಜಿರಾವ್ ಜಾದವ್, ದಿನೇಶ್‌ರಾವ್ ಚವ್ಹಾಣ್, ಸುರೇಶ್ ಬಾಬು, ರಘುನಾಥ ಬಾಮನೆ, ರಾಜಕುಮಾರ್ ಜಗತಾಪ್, ತುಕರಾಮ್ ಮಾನೆ, ರಮೇಶ್ ಘಾಟ್ಗೆ, ರಾಕೇಶ್ ಮೋರೆ ಇದ್ದರು.

