District NewsLatest News

ಅಂಬೇಡ್ಕರ್ ಭವನ ಉದ್ಘಾಟನೆ ವಿಳಂಬ: ಸಿಎಂ ವಿರುದ್ಧ ಆಕ್ರೋಶ

Share Below Link

ಶಿವಮೊಗ್ಗ ನ್ಯೂಸ್‌ ವರದಿ,

ಶಿವಮೊಗ್ಗ : ಭದ್ರಾವತಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 2ವರ್ಷಗಳಿಂದಲೂ ಉದ್ಘಾಟನೆಗೆ ಆಗಮಿಸದೆ ನಿರ್ಲಕ್ಷö್ಯ ತೋರಿಸುತ್ತಿರುವುದು ಸರಿಯಲ್ಲ, ಬರುವ ಏಪ್ರಿಲ್ 14ರ ಒಳಗೆ ಅವರು ಅಂಬೇಡ್ಕರ್ ಭವನವನ್ನು ಉದ್ಘಾಟಿಸದಿದ್ದರೆ ನಾವೇ ಉದ್ಘಾಟಿಸಬೇಕಾಗುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ಹೃದಯಭಾಗವಾದ ಕನಕ ಮಂಟಪದ ಮುಂಭಾಗದಲ್ಲಿ ಭಾರತರತ್ನ, ಡಾ.ಬಿ.ಆರ್. ಅಂಬೇಡ್ಕರ್‌ರವರ ಭವನವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಇದು ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸಬೇಕು ಎಂದು ಹಲವು ಭಾರಿ ಮನವಿ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಉದ್ಘಾಟನೆಗೆ ಬಾರದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅವರಿಗೆ ಶಿವಮೊಗ್ಗೆಕ್ಕೆ ಬಂದು ಮದುವೆ ಮನೆಗೆ ಹೋಗಲು ಸಮಯ ಇರುತ್ತದೆ. ಅಂಬೇಡ್ಕರ್ ಭವನ ಉದ್ಘಾಟನೆಗೆ ಸಮಯವಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಭದ್ರಾವತಿಯ ಅಂಬೇಡ್ಕರ್ ಭವನವು ಹಲವು ವರ್ಷಗಳ ಹೋರಾಟದ ಫಲವಾಗಿ ನಿರ್ಮಾಣಗೊಂಡಿದೆ. ರಾಜ್ಯದಲ್ಲಿಯೇ ವಿಶಾಲವಾದ ಭವನ ಇದಾಗಿದೆ. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಭವನಕ್ಕೆ ಊಟದ ಕೋಣೆ ಮತ್ತು ವಿಶ್ರಾಂತಿ ಕೊಠಡಿಗಾಗಿ ಇನ್ನೂ ಎರಡು ಕೋಟಿ ಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಮನವಿ ಕೂಡ ಸಲ್ಲಿಸಲಾಗಿದೆ. ರೈತ ಹೋರಾಟಗಾರರು, ದಲಿತ ಸಂಘಟನೆಗಳ ಮುಖಂಡರು, ಈ ಭವನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಮತ್ತು 2018ರಿಂದಲೇ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯನ್ನು ಕೂಡ ರಚಿಸಲಾಗಿದೆ. ಇಷ್ಟೇಲ್ಲಾ ಮಹತ್ವವಿರುವ ಅಂಬೇಡ್ಕರ್ ಭವನವನ್ನು ಇದೂವರೆಗೂ ಉದ್ಘಾಟನೆ ಮಾಡದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಭಾಗದ ಶಾಸಕರು, ಈ ಬಗ್ಗೆ ಗಮನಹರಿಸಬೇಕು. ಬರುವ ಏಪ್ರಿಲ್ 14ರಂದು ಜ್ಞಾನದದಿನ ಎಂದು ಆಚರಣೆಮಾಡಿ, ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಆದ್ದರಿಂದ ಅಷ್ಟರೊಳಗೆ ಮುಖ್ಯಮಂತ್ರಿಗಳು ಉದ್ಘಾಟಿಸಬೇಕು. ಇಲ್ಲದಿದ್ದರೆ ಸಮಿತಿವತಿಯಿಂದಲೇ ಭವನವನ್ನು ಉದ್ಘಾಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಸದಸ್ಯರಾಗಿ ಎನ್.ಗಿರಿಯಪ್ಪನವರು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ. ಪ್ರೊ.ಬಿ.ಕೃಷ್ಣಪ್ಪನವರ ಗರಡಿಯಲ್ಲಿ ಬೆಳೆದ ಇವರು ಬಡವರಿಗೆ, ದೀನದಲಿತರಿಗೆ ಚೈತನ್ಯ ತುಂಬುವ ನಾಯಕರಾಗಿದ್ದಾರೆ. ಚಂದ್ರಗುತ್ತಿಯ ಬೆತ್ತಲೆಸೇವೆ ವಿರುದ್ಧ ಹೋರಾಡಿದವರು ಕೂಡ. ಹಾಗಾಗಿ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸರ್ಕಲ್‌ಗೆ ಇವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೂಡ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತೀರ್ಥೆಶ್, ಗವಿಸಿದ್ಧಪ್ಪ, ಸಿದ್ಧಲಿಂಗಯ್ಯ, ಎಂ.ವಿ.ಚಂದ್ರಶೇಖರ್, ಟಿ.ಜಿ. ಬಸವರಾಜಯ್ಯ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *