ಜಿಲ್ಲಾ ಸುದ್ದಿತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಡಿ.31: ಶ್ರೀರಾಮನ ಆದರ್ಶ ಅನುಗ್ರಹ ಸಂದೇಶ ಪ್ರವಚನ

Share Below Link

ಶಿವಮೊಗ್ಗ (ಶಿವಮೊಗ್ಗ ನ್ಯೂಸ್‌ ವರದಿ): ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಡಿ.31 ಹಾಗೂ ಜ.1 ಮತ್ತು 2ರಂದು ಮೂರು ದಿನಗಳ ಕಾಲ ಶುಭಮಂಗಳ ಸಮುದಾಯ ಭವನದಲ್ಲಿ ಪ್ರತಿದಿನ ಸಂಜೆ 6.30ರಿಂದ ಶ್ರೀರಾಮನ ಆದರ್ಶ ಅನುಗ್ರಹ ಸಂದೇಶ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಡಾ. ಮೈತ್ರೇಯಿ ಆದಿತ್ಯಪ್ರಸಾದ್‌ ಹೇಳಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಂಧ ಸಂಸ್ಥೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಖ್ಯಾತ ವಿದ್ವಾಂಸರುಗಳಿಂದ ಉಪನ್ಯಾಸ, ಸಾಹಿತ್ಯ, ಸಂಗೀತ, ನಾಟ್ಯ, ವಿಚಾರ ಸಂಕಿರಣದಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು, ಅದರ ಮುಂದುವರೆದ ಭಾಗವಾಗಿ ಡಿ.31ರಿಂದ ಜ.2ರವರೆಗೆ ಮೂರು ದಿನಗಳ ಕಾಲ ಶ್ರೀಶ್ರೀ1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಶ್ರೀರಾಮನ ಆದರ್ಶ ಕುರಿತು ವಿಶೇಷ ಪ್ರವಚನ ಹಾಗೂ ಅನುಗ್ರಹ ಸಂದೇಶ ನೀಡುವರು ಎಂದರು.

ಶ್ರೀಗಳವರು ಸನ್ಯಾಸಿಗಳು ನಾಡಿನ ಪ್ರಖ್ಯಾತ ವಾಗ್ಮಿಗಳು ಆಗಿದ್ದಾರೆ. ಅವರ ಪ್ರವಚನ ಪ್ರತಿದಿನ ಸಂಜೆ 6.30ರಿಂದ ಆರಂಭವಾಗುತ್ತದೆ. ಅದಕ್ಕಿಂತ ಮುಂಚೆ 6ಕ್ಕೆ ವಿದ್ವಾಂಸರುಗಳಾದ ನವರತ್ನ ಶ್ರೀನಿವಾಸಾಚಾರ್‌ ಶ್ರೀರಘೋತ್ತಮಾಚಾರ್‌, ರಾಯಚೂರು ಕೃಷ್ಣಚಾರ್‌ ಇವರುಗಳು ಸನಾತನ ಧರ್ಮದ ಸಾರ ಎಂಬ ವಿಷಯವಾಗಿ ಚರ್ಚೆ ನಡೆಸಿಕೊಡಲಿದ್ದಾರೆ ಎಂದರು.

ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರ್ಮಿಕ ವಿದ್ವಾಂಸರಾಗಿದ್ದಾರೆ. ಅವರು ಒಮ್ಮೆ ನನ್ನ ಪ್ರತ್ಯೇಕವಾಗಿ ಕರೆದು ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂದು ತಿಳಿಸಿದ್ದರು. ಆಗ ಬಿ.ಎಸ್‌.ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದರು. ಅವರಿಗೆ ನಾನು ಶ್ರೀಗಳ ಸಂದೇಶವನ್ನು ತಲುಪಿಸಿದ್ದೆ, ಆಗ ಆ ಬಿಲ್‌ ಪಾಸಾಗಿತ್ತು. ಶ್ರೀಗಳ ಬಗ್ಗೆ ನನ್ನ ಗೌರವ ಮತ್ತಷ್ಟು ಇಮ್ಮಡಿಯಾಗಿತ್ತು ಎಂದರು.

ಶ್ರೀರಾಮನ ಆದರ್ಶ ನಮಗೆ ಇಂದು ಅಗತ್ಯವಾಗಿ ಬೇಕಾಗಿದೆ. ರಾಮನ ಚಿಂತನೆಗಳು ಆಡಳಿತ ನಡೆಸುವ ಎಲ್ಲರಿಗೂ ಅಗತ್ಯವಿದೆ. ಶ್ರೀಗಳು ಬೇರೆ ಬೇರೆ ಆಯಾಮಗಳಲ್ಲಿ ಇದನ್ನು ಸರಳವಾಗಿ ತಿಳಿಸಿಕೊಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಬರೀಶ್‌ ಕಣ್ಣನ್‌, ಬಾಲು, ಉಮೇಶ್‌ ಆರಾಧ್ಯ, ಕುಬೇರಪ್ಪ, ತುಕಾರಾಮ್‌, ಶಿವಾಜಿ, ಅರವಿಂದ್‌ ಮುಂತಾದವರು ಇದ್ದರು.

error: Content is protected !!