District NewsLatest News

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕಡಿಮೆ: ಕಾಂಗ್ರೆಸ್ ಆರೋಪ

Share Below Link

ಶಿವಮೊಗ್ಗ ನ್ಯೂಸ್‌ ವರದಿ,

ಶಿವಮೊಗ್ಗ, ಮಾ. 07: 4.48 ಲಕ್ಷ ಕೋಟಿ ರೂಪಾಯಿ ಮೊತ್ತದ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ 17 ಭಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಬಜೆಟ್‌ನಲ್ಲಿ ಎಲ್ಲಾ ವರ್ಗದವರಿಗೆ ಕೊರತೆಯಾಗದಂತೆ ಪಂಚ ಗ್ಯಾರೆಂಟಿಗಳಿಗೆ ಅನುದಾನ ನೀಡಿ, ಭರವಸೆಯಂತೆ ಮಾತಿಗೆ ತಪ್ಪಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಹಲವು ರಾಜ್ಯಗಳು ಗ್ಯಾರೆಂಟಿ ಘೋಷಣೆ ಮಾಡಿದ್ದವು. ಆದರೆ ಒಂದೇ ವರ್ಷದಲ್ಲೇ ಅದನ್ನು ನಿಲ್ಲಿಸಿದ್ದಾರೆ. ಆದರೆ ಸಿದ್ಧರಾಮಯ್ಯ ಸರ್ಕಾರ ಅದನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರತಿವರ್ಷಕ್ಕೆ 50 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಅಲ್ಲದೆ ಬೇರೆ ಬೇರೆ ಇಲಾಖೆಗೆ ಸಾಕಷ್ಟು ಅನುದಾನವನ್ನು ಕೂಡ ನೀಡಿದೆ. ವಿಶೇಷವೆಂದರೆ ಈ ಬಜೆಟ್‌ನಲ್ಲಿ 54 ಸಾವಿರ ಹುದ್ದೆ ಭರ್ತಿಮಾಡುವ ಪ್ರಸ್ತಾಪವಿದೆ. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದು, 800 ಕೆಪಿಎಸ್ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ 3900 ಕೋಟಿ ರೂ. ಹಣ ನಿಗಧಿಪಡಿಸಲಾಗಿದ್ದು, ಮುಂದಿನ ಏಪ್ರಿಲ್ ತಿಂಗಳಿನಲ್ಲಿ ರಾಜ್ಯಾದ್ಯಂತ ನಿರ್ಮಾಣವಾಗುವ ಕೆಪಿಎಸ್ ಶಾಲೆಗಳಿಗೆ ಮುಖ್ಯಮಂತ್ರಿಗಳೇ ಶಿವಮೊಗ್ಗದಿಂದ ಚಾಲನೆ ನೀಡಲಿದ್ದಾರೆ ಎಂದರು.

ದ್ವಿಭಾಷಾ ಪದ್ಧತಿಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಇಂಗ್ಲೀಷ್ ಭಾಷಾ ತರಬೇತಿಗಾಗಿ 24 ಕೋಟಿ ಕಾಯ್ದಿರಿಸಲಾಗಿದೆ. 15ಸಾವಿರ ಶಿಕ್ಷಕರ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಶಾಲಾ ಕಟ್ಟಡಗಳ ದುರಸ್ತಿಗೆ 800 ಕೋಟಿ ಮೀಸಲಿಟ್ಟಿದೆ ಎಂದರು.

ಕಾಂಗ್ರೆಸ್ ಸರ್ಕಾರ ಸಾಲವನ್ನು 8ಲಕ್ಷ ಕೋಟಿಗೆ ಏರಿಸಿದೆ ಎಂದು ಟೀಕೆ ಮಾಡುವ ಬಿಜೆಪಿ ನಾಯಕರು ಬೊಮ್ಮಾಯಿ ಅಧಿಕಾರ ಬಿಟ್ಟು ಹೋಗುವಾಗ 5.35ಲಕ್ಷ ಕೋಟಿ ಸಾಲ ಮಾಡಿದ್ದರು ಎಂಬುದನ್ನು ಮರೆಮಾಚಿದ್ದಾರೆ. ಸಾಲದ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗರಿಗೆ ಇಲ್ಲ. ಬೊಮ್ಮಾಯಿ ಸರ್ಕಾರ ಇಳಿಯುವ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಲಸ ಮಾಡಿದ ಗುತ್ತಿಗೆದಾರರಿಗೆ 40 ಸಾವಿರ ಕೋಟಿ ಬಾಕಿ ಇಟ್ಟಿದ್ದರು. ಕೇಂದ್ರದಲ್ಲಿ ಮನ್‌ಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಕೇವಲ 53ಲಕ್ಷ ಕೋಟಿ ಸಾಲವಿತ್ತು. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 197 ಲಕ್ಷ ಕೋಟಿ ದೇಶಕ್ಕೆ ಸಾಲವಿದೆ. ಈ ಬಗ್ಗೆ ಚಕಾರವೆತ್ತುತ್ತಿಲ್ಲ. ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣವನ್ನು ಕಡಿಮೆ ಮಾಡಲಾಗಿದ್ದು, ರಾಜ್ಯದ ಪಾಲಿನ ತೆರಿಗೆಹಣ ಕೇಂದ್ರದಿಂದ ಬಾಕಿಯಿದ್ದರೂ ಕೂಡ ರಾಜ್ಯ ಸರ್ಕಾರ ಅಭಿವೃದ್ಧಿಯ ಜೊತೆಗೆ ಗ್ಯಾರೆಂಟಿಯನ್ನೂ ನಿಲ್ಲಿಸದೇ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.

ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡುವುದರ ಮೂಲಕ ಸಿದ್ಧರಾಮಯ್ಯನವರು ಸಾಮಾಜಿಕ ಚಳುವಳಿಯ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ. ಬಡವರಿಗೆ, ರೈತರಿಗೆ 30,000ಕೋಟಿ ಬಡ್ಡಿರಹಿತ ಸಾಲಕ್ಕೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ರೈತರ ಬೆಳೆಗೆ ಒಳ್ಳೆಯ ಬೆಲೆಯನ್ನೂ ನೀಡಿಲ್ಲ. ಅಡುಗೆ ಅನಿಲಕ್ಕೆ ಇಂದಿನಿಂದ ಕೇಂದ್ರ 60 ರೂ.ವನ್ನು ಜಾಸ್ತಿ ಮಾಡಿದೆ. ಜಿಎಸ್‌ಟಿ ದರವನ್ನು ಇಳಿಸಿ ಅದರಿಂದಲೂ ರಾಜ್ಯ ಸರ್ಕಾರಕ್ಕೆ 10ಸಾವಿರ ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ರಾಜ್ಯದ ಆದಾಯದಲ್ಲಿ ಜಿಎಸ್‌ಟಿಯಿಂದ ಶೇ.53ರಷ್ಟು ಬರಬೇಕಾಗಿದ್ದು, 2025-2026ನೇ ಸಾಲಿನ ಆ ಪ್ರಮಾಣ ಕೂಡ ಕಡಿಮೆಯಾಗಿದ್ದು, ಸುಮಾರು 15,000 ಕೋಟಿ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ. ಕಳೆದಬಾರಿ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಲಾಗಿತ್ತು. ಆದರೆ ಒಂದು ನಯಾಪೈಸೆಯನ್ನು ಕೇಂದ್ರ ನೀಡಿಲ್ಲ. ಚಿತ್ರದುರ್ಗ ಭಾಗದ ಜನರು ಕುಡಿಯುವ ನೀರಿಗೆ ಕಷ್ಟಪಡುತ್ತಿದ್ದಾರೆ. ಆ ಭಾಗದ ಹಿರಿಯ ಸಂಸದ ಗೋವಿಂದ ಕಾರಜೋಳ ಈ ಬಗ್ಗೆ ಚಕಾರ ವೆತ್ತುತ್ತಿಲ್ಲ. ಶಿವಮೊಗ್ಗದ ಕೆಲವೊಂದು ಪ್ರಸ್ತಾವನೆಗಳು ಈಡೇರಲು ಬಾಕಿಯಿದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆ, ಜಿಲ್ಲಾಡಳಿತ ಭವನ ಇವೆಲ್ಲವೂ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ. ಅಧಿಕೃತವಾಗಿ ಸಿಎಂ ಏಪ್ರಿಲ್‌ನಲ್ಲಿ ಶಿವಮೊಗ್ಗಕ್ಕೆ ಬಂದಾಗ ಘೋಷಣೆ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ಹಾಲಪ್ಪ, ಜಿ.ಡಿ. ಮಂಜುನಾಥ್, ಶಿವಕುಮಾರ್, ಶಿವಣ್ಣ, ಜಿ. ಪದ್ಮನಾಬ್, ಸೈಯದ್ ವಾಹಿದ್ ಅಡ್ಡು, ಶಿ.ಜು. ಪಾಷಾ ಇದ್ದರು.

Leave a Reply

Your email address will not be published. Required fields are marked *