ಸೊರಬ ದಸರಾ ಉತ್ಸವದಲ್ಲಿ ಸೌಹಾರ್ದ ಸಂದೇಶ: ಜಾತಿ-ಮತ ಭೇದ ಮರೆತು ಒಗ್ಗಟ್ಟಿಗೆ ಅತೀಕ್ ಉರ್ ರೆಹಮಾನ್ ಕರೆ
ಸೊರಬ: ಸಮಾಜದಲ್ಲಿ ನಡೆಯುವ ಕೆಡುಕುಗಳನ್ನು ವಿರೋಧಿಸಲು ಜಾತಿ-ಮತಗಳ ಭಿನ್ನಾಭಿಪ್ರಾಯ ಸಲ್ಲದು, ಎಲ್ಲರೂ ಒಗ್ಗೂಡಿ ಪ್ರೀತಿ-ವಿಶ್ವಾಸದ ಸೌಹಾರ್ದಯುತ ನಾಡು ಕಟ್ಟಲು ಮುಂದಾಗಬೇಕು ಎಂದು ಕೆಡಿಪಿ ಸದಸ್ಯ ಅತೀಕ್ ಉರ್ ರೆಹಮಾನ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಶುಕ್ರವಾರ ಹಮ್ಮಿಕೊಂಡ 18ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ಆರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಿ ಸಮಾಜದ ಸತ್ಪçಜೆಗಳನ್ನಾಗಿಸುವ ಹೊಣೆ ಎಲ್ಲರ ಮೇಲಿದೆ. ದೇಶದಲ್ಲಿಯೇ ರಾಜ್ಯದ ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತದೆ. ಅಂತೆಯೇ ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ದಸರಾ ಉತ್ಸವ ಕಳೆಗಟ್ಟುತ್ತಿದೆ. ಎಲ್ಲಾ ಸಮುದಾಯದವರು ಒಗ್ಗೂಡಿ ಹಬ್ಬವನ್ನು ಆಚರಿಸುವುದು ಮಾದರಿಯಾಗಿದೆ ಎಂದರು.
ಉಪನ್ಯಾಸಕ ಹಾಗೂ ಪತ್ರಕರ್ತ ರವಿ ಕಲ್ಲಂಬಿ ಮಾತನಾಡಿ, ದಸರಾ ಕೇವಲ ಹಬ್ಬವಾಗಿರದೇ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾದ ಸಂದೇಶವನ್ನು ನೀಡುತ್ತದೆ. ದಸರಾದಲ್ಲಿ ಶಕ್ತಿ, ಭಕ್ತಿ, ವಿಜಯದ ಮಹತ್ವವಿದ್ದು, ದೇಶದ ವಿವಿಧಡೆ ದಸರಾವನ್ನು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಇದಕ್ಕೆ ಮೂಲ ಕಾರಣೀಕರ್ತರು ವಿಜಯನಗರ ಸಾಮ್ರಾಜ್ಯದ ಅರಸರು. ಇಂದಿಗೂ ಮಹಾನವಮಿ ದಿಬ್ಬ ಎಂಬುದನ್ನು ಕಾಣಬಹುದು. ಈ ಪರಂಪರೆಯನ್ನು ಮುಂದುವರೆಸಿದ ಕೀರ್ತಿ ಮೈಸೂರು ಅರಸರಾದ ರಾಜ ಒಡೆಯರ್ ಅವರಿಂದ ಪ್ರಾರಂಭವಾಗಿ ಯುದುವೀರ ಕೃಷ್ಣದತ್ತ ಒಡೆಯರ್ ಅವರಿಗೆ ಸಲ್ಲುತ್ತದೆ. ನಮ್ಮ ನಾಡ ಹಬ್ಬವನ್ನು ವಿದೇಶಿ ಪ್ರವಾಸಿಗರು ಜಗತ್ತಿನೆಲ್ಲೆಡೆ ಪ್ರಚಾರ ಮಾಡಿದರು. ಆದ್ದರಿಂದ ಮೈಸೂರು ದಸರಾ ವಿಶ್ವ ವಿಖ್ಯಾತಿಗಳಿಸಲು ಸಾಧ್ಯವಾಯಿತು. ಎಂದರು.
ಹಸೆ ಚಿತ್ರ ಕಲಾವಿದ ವಿಶ್ವನಾಥ ಹೆಚ್ಚೆ ಅವರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ಟೋಕಪ್ಪ ಮಂಚಿ, ಲಕ್ಷö್ಮಣ ಸಾಗರ ನಡಹಳ್ಳಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್ ಅವರನ್ನು ದಸರಾ ಉತ್ಸವ ಸಮಿತಿಯಿಂದ ಅಭಿನಂದಿಸಲಾಯಿತು. ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ್ ಸಣ್ಣಬೈಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಹಳೇಸೊರಬದ ಟಿಎಪಿಎಂಎಸ್ ಅಧ್ಯಕ್ಷ ಕೆ. ಪ್ರಕಾಶ್, ನಿರ್ದೇಶಕ ಡಾಕಪ್ಪ ಪಾಣಿ, ಪಟ್ಟಣ ಆಶ್ರಯ ಸಮಿತಿ ಸದಸ್ಯ ಚಿನ್ನಪ್ಪ, ಶಿವಾನಂದ ಬಿಳಗಿ, ಮಂಜುನಾಥ ತುರುವೆಕೆರೆ, ಸಿ.ಪಿ. ಈರೇಶ್ಗೌಡ, ಜಿ. ಬಂಗಾರಪ್ಪ ಜಡೇಕರ್, ಯು. ಫಯಾಜ್ ಆಹ್ಮದ್, ಗುರುಮೂರ್ತಿ, ಸುರೇಶ್ ಭಂಡಾರಿ, ವಿಜಯಕುಮಾರ್ ಬಾಂಬೋರೆ ಸೇರಿದಂತೆ ಇತರರಿದ್ದರು. ಪ್ರೇಮಾ ಚಂದ್ರಶೇಖರ್ ಪ್ರಾರ್ಥಿಸಿ, ಸಂಜೀವ ಆಚಾರ್ ಸ್ವಾಗತಿಸಿ, ನೆಹರೂ ಕೊಡಕಣಿ ವಂದಿಸಿದರು. ಡಿ. ಶಿವಯೋಗಿ ನಿರೂಪಿಸಿದರು.

