District News

ದೇವಿಯ ಕೃಪೆಯಿಂದ ಕುವೆಂಪು ವಿವಿಯ ಗೊಂದಲಗಳು ನಿವಾರಣೆಯಾಗಲಿವೆ: ಕುಲಪತಿ ಪ್ರೊ. ಶರತ್ ಆನಂತಮೂರ್ತಿ

Share Below Link

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಗೊಂದಲಗಳೆಲ್ಲವೂ ದೇವಿಯ ಕೃಪೆಯಿಂದ ಸಂಹಾರವಾಗಲಿವೆ ಎಂದು ಕುಲಪತಿ ಪ್ರೊ. ಶರತ್ ಆನಂತಮೂರ್ತಿ ಹೇಳಿದರು. ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶನಿವಾರ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ವಿವಿಯಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಗೊಂದಲಗಳಿರುವುದು ನಿಜ. ಪರೀಕ್ಷಾ ಪದ್ಧತಿಯಲ್ಲಿರುವ ಗೊಂದಲಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸರ್ಕಾರದ ಅನುದಾನದ ಕೊರತೆಯೂ ಇದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ, ಬೋಧಕ ಸಿಬ್ಬಂದಿ ನೇಮಕಾತಿಯೂ ಆಗಿಲ್ಲ. ಅತಿಥಿ ಉಪನ್ಯಾಸಕರು ಕಷ್ಟಪಡುತ್ತಿದ್ದಾರೆ. ಈ ಬಾರಿ ಸಹ್ಯಾದ್ರಿಯ ಮೂರು ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಾಗಿದೆ. ಎಲ್ಲವೂ ಸರಿ ಹೋಗಲಿದ್ದು, ಮತ್ತೆ ಒಳ್ಳೆಯ ದಿನಗಳು ಬರಲಿವೆ ಎಂದರು.

ಕಲಿಯುವುದು ಹೇಗೆ ಎಂಬುದನ್ನೇ ನಾವು ಇಂದು ಕಲಿಯಬೇಕಾಗಿದೆ. ಎನ್.ಸಿ.ಸಿ, ಎನ್.ಎಸ್.ಎಸ್, ಯುವ ರೆಡ್ ಕ್ರಾಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದು ಅವರು ತಿಳಿಸಿದರು. ಪ್ರಾಂಶುಪಾಲ ಡಾ. ಅವಿನಾಶ್ ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಘಟಕಗಳು ವರ್ಷಪೂರ್ತಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲ ಇರಲಿದೆ ಎಂದರು.

ಕಾರ್ಯಕ್ರಮದಲ್ಲಿ ಜನಪದ ಕಲಾವಿದ ನವೀನ್ ಕೊರಗಿ ಮತ್ತು ತಂಡದವರು ಜನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ರ‍್ಯಾಂಕ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಡಾ. ಜಯಕೀರ್ತಿ, ಡಾ. ಸರಳಾ ಕೆ.ಎಸ್, ಡಾ. ಮಮತಾ ಎಸ್.ಎಂ, ಡಾ. ಗಿರಿಧರ್ ಕೆ.ವಿ, ಡಾ. ವೀರಶೆಟ್ಟಿ ಜಿ. ರಾಥೋಡ್, ಡಾ. ಶಶಿರಾಜ್ ಯು, ಡಾ. ಲವ ಜಿ.ಆರ್, ಪರಶುರಾಮ್, ಡಾ. ಶಿವಕುಮಾರ್ ಹೆಚ್.ಟಿ, ಜ್ಞಾನೇಶ್ ಎಸ್, ವನಿತಾಗೌಡ, ಸಮೃದ್ಧ ಮದಕರಿ, ವಿಕಾಸ್ ಸೇರಿದಂತೆ ಬೋಧಕರು ಮತ್ತು ವಿದ್ಯಾರ್ಥಿ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *