District NewsLatest News

ರಾಷ್ಟ್ರೀಯ ಏಕತಾ ದಿನಾಚರಣೆ: ರಾಷ್ಟ್ರೀಯ ಮೋಟಾರ್ ಸೈಕಲ್ ರ್ಯಾಲಿಗೆ ಅದ್ದೂರಿ ಸ್ವಾಗತ

Share Below Link

ಮಾದಕ ದ್ರವ್ಯಗಳ ಸೇವನೆ ವಿರುದ್ದ ಪ್ರತಿಜ್ಞೆ -ತಡೆಗೆ ಯುವಜನತೆಗೆ ಕರೆ: ನಿಖಿಲ್.ಬಿ

ಶಿವಮೊಗ್ಗ: ಮಾದಕ ದ್ರವ್ಯಗಳ ದುರುಪಯೋಗವು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವಜನತೆ ದೃಢ ಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿ, ಇದನ್ನು ತಡೆಯಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಯುವಜನತೆಗೆ ಕರೆ ನೀಡಿದರು.

ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಮಾದಕ ದ್ರವ್ಯ ದುರುಪಯೋಗದ ವಿರುದ್ಧದ ಜಾಗೃತಿ ಸಂದೇಶದೊಂದಿಗೆ ಶನಿವಾರ ಚಿತ್ರದುರ್ಗದಿಂದ ಹಂಚಿನ ಸಿದ್ದಾಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ ಮೋಟಾರ್ ಸೈಕಲ್ ರ್ಯಾಲಿ ತಂಡವನ್ನು ನಗರದ ಗೋಪಿ ಸರ್ಕಲ್‌ನಲ್ಲಿ ಸಾರ್ವಜನಿಕರು ಮತ್ತು ಸಂಘಟಕರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ, ಅವರು ಮಾತನಾಡಿದರು.

ಈ ಅಭಿಯಾನದಡಿ ಜಿಲ್ಲೆಯಲ್ಲಿ ಡ್ರಗ್ಸ್ ಸೇವಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗದಲ್ಲೇ ಈ ವರ್ಷ ಸುಮಾರು 550 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಸುಮಾರು 40 ಕೆ.ಜಿ ಗಾಂಜಾ ಮತ್ತು ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಮಾರಾಟದಲ್ಲಿ ತೊಡಗಿರುವವರನ್ನು ಜೈಲಿಗೆ ಕಳುಹಿಸಲಾಗಿದ್ದು, ಎನ್ ಡಿ ಪಿ ಎಸ್ ಕಾಯ್ದೆಯಡಿ ಅಪರಾಧಿಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಹೀಗೆ ಮಾದಕ ದ್ರವ್ಯ ಬಳಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕವನ್ನು ಸಂಪೂರ್ಣವಾಗಿ ನಶಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ವತಿಯಿಂದ ‘ ಬೇಡ ಬ್ರೋ’ ‘ನಶಾ ಮುಕ್ತ ಕರ್ನಾಟಕ’ ಮತ್ತು ‘ಆಪರೇಷನ್ ರೈಸ್’ ಎಂಬ ವಿಶೇಷ ಆ್ಯಂಟಿ ಡ್ರಗ್ ಪ್ರೋಗ್ರಾಂ ಅನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಎಸ್ಆರ್ಪಿ ತಂಡವು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಗುಜರಾತ್ ವರೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕೆಎಸ್ಆರ್ಪಿ ಬೈಕ್ ರಾಲಿ: ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ, ಕೆಎಸ್ಆರ್ಪಿ ಪಡೆಯು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಬೈಕ್ ರಾಲಿಯನ್ನು ಹಮ್ಮಿಕೊಂಡಿದೆ. ಈ ಬೈಕ್ ರ್ಯಾಲಿಯು ಬೆಂಗಳೂರಿನಿಂದ ಪ್ರಾರಂಭವಾಗಿ ಚಿತ್ರದುರ್ಗ, ಶಿವಮೊಗ್ಗ, ಸಾಗರ, ಗೋಕರ್ಣ, ಗೋವಾ, ಪಣಜಿ, ಬಾಂಬೆ ಮೂಲಕ ಕೇವಡಿಯವರೆಗೆ ಸಾಗಿ ಅಲ್ಲಿ ಈ ಜಾಗೃತಿ ಜಾಥಾವನ್ನು ಮುಕ್ತಾಯಗೊಳಿಸಲಿದೆ ಎಂದರು.

ಸ್ವಾಗತ ಸಮಾರಂಭದ ಬಳಿಕ, ಭಾಗವಹಿಸಿದ ಎಲ್ಲ ಸವಾರರು, ವಿದ್ಯಾರ್ಥಿಗಳು ಹಾಗೂ ಗಣ್ಯರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯವರು ‘ಏಕತಾ ಗೋಡೆ’ಯ ಮುಂಭಾಗದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಒಗ್ಗಟ್ಟಾಗಿ ಹೋರಾಡುವುದಕ್ಕಾಗಿ ಕರೆ ನೀಡುವ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗೂ ಇದೇ ವೇಳೆ ಏಕತಾ ಗೋಡೆ ಮೇಲೆ ಎಸ್ ಪಿ ಸೇರಿದಂತೆ ಯುವಕರು ತಮ್ಮ ಸಂದೇಶಗಳನ್ನು ಬರೆದರು.

ಪ್ರತಿಜ್ಞಾ ವಿಧಿ ಸ್ವೀಕಾರದ ನಂತರ, ಸ್ಥಳೀಯ ಬೈಕ್ ಸವಾರರೊಂದಿಗೆ ರ್ಯಾಲಿಯು ಗೋಪಿ ಸರ್ಕಲ್‌ನಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಸಾಗಿದ ಮಾರ್ಗ: ಗೋಪಿ ಸರ್ಕಲ್‌ನಿಂದ ಹೊರಟ ರ್ಯಾಲಿಯು ಎ.ಎ. ಸರ್ಕಲ್, ಕರ್ನಾಟಕ ಸಂಘ, ಶಂಕರ ಮಠ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ರೈಲ್ವೆ ನಿಲ್ದಾಣದ ಎದುರು, ಎ.ಎ. ಕಾಲೋನಿ, ಉಷಾ ಸರ್ಕಲ್, ವಿನೋಬಾ ನಗರ 60 ಅಡಿ ರಸ್ತೆ, ಆಲ್ಕೋಳ ಸರ್ಕಲ್, ಗೋಪಾಲ ಗೌಡ ಬಡಾವಣೆ ಹಾಗೂ ಡಿವಿಜಿ ಸರ್ಕಲ್ ಮೂಲಕ ಸಂಚರಿಸಿತು.

ಸಮಾಪ್ತಿ: ಬಳಿಕ ಡಿಎಆರ್ ಮಂಡಳಿ ಸರ್ಕಲ್, ಸಂದೇಶ್ ಮೋಟಾರ್ಸ್, ಎನ್.ಟಿ. ರಸ್ತೆ, ಗೋಪಾಳ ಬಸ್ ನಿಲ್ದಾಣ ಮತ್ತು ತುಂಗಾ ನಗರ ಬೈಪಾಸ್ ಮೂಲಕ ಸಾಗಿ ಅಶೋಕ ಸರ್ಕಲ್ ಆಡಿಟೋರಿಯಂನಲ್ಲಿ ರ್ಯಾಲಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರಿಗೆ ಸುರಕ್ಷತಾ ಸಂದೇಶವನ್ನೂ ನೀಡಿದರು.

ಮಾದಕ ದ್ರವ್ಯದ ವಿರುದ್ಧದ ಈ ಐಕ್ಯತಾ ಅಭಿಯಾನದಲ್ಲಿ ಕೆಎಸ್ ಆರ್ ಪಿ ಕಮಾಂಡೆಂಟ್ ಯುವಕುಮಾರ್, ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು, ನಗರದ ಅನೇಕ ಯುವಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *